ADVERTISEMENT

ಜಮಖಂಡಿ| ಶೈಕ್ಷಣಿಕವಾಗಿ ಹಿಂದಿದೆ ಮುಸ್ಲಿಂ ಸಮಾಜ: ಸಚಿವ ಜಮೀರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:40 IST
Last Updated 25 ಜನವರಿ 2026, 4:40 IST
ಜಮಖಂಡಿಯ ಎಪಿಜೆ ಅಬ್ದುಲ್‌ ಕಲಾಂ ಶಾಲೆಯ 18ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಜಮಖಂಡಿಯ ಎಪಿಜೆ ಅಬ್ದುಲ್‌ ಕಲಾಂ ಶಾಲೆಯ 18ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಜಮಖಂಡಿ: ಶೈಕ್ಷಣಿಕವಾಗಿ ಮುಸ್ಲಿಂ ಸಮಾಜ ಹಿಂದುಳಿದಿದ್ದು, ಲೌಕಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಸತಿ, ವಕ್ಫ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ ಅಹ್ಮದ ಖಾನ್‌ ಹೇಳಿದರು.

ಇಲ್ಲಿನ ಎಪಿಜೆ ಅಬ್ದುಲ್‌ ಕಲಾಂ ಶಾಲೆಯ 18ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಹೆಚ್ಚು ಮಕ್ಕಳು ಮದರಸ್ಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಅದರ ಜೊತೆಗೆ ಶಾಲಾ ಶಿಕ್ಷಣ ಪಡೆಯಬೇಕು ಅಂದರೆ ಸರ್ಕಾರಿ ನೌಕರಿ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.

ಸಿಎಂ ಸಿದ್ಧರಾಮಯ್ಯ ₹4500 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ್ದಾರೆ. ಆ ಪೈಕಿ ₹2900 ಕೋಟಿ ಶಿಕ್ಷಣಕ್ಕೆ ಬಳಸಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಜೊತೆಗೆ ರಾಜ್ಯದ 100 ಉರ್ದು ಮಾಧ್ಯಮದ ಶಾಲೆಗಳಿಗೆ ತಲಾ ₹5 ಕೋಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಸ್ಲಿಂ ಸಮಾಜದ ಬಡ ಮಕ್ಕಳು ಹಣದ ಕೊರತೆಯಿಂದಾಗಿ ಶಿಕ್ಷಣ ಮೊಟಕು ಗೊಳಿಸುತ್ತಿದ್ದು, ಅಂತಹ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ ಎಂದರು.

ADVERTISEMENT

ಕರ್ನಾಟಕ ಹಜ್‌ ಕ್ಯಾಂಪ್‌ನಲ್ಲಿ ಐಎಎಸ್‌, ಐಪಿಎಸ್‌ ತರಬೇತಿ ನೀಡಲಾಗುತ್ತಿದ್ದು, ಕಳೆದ ವರ್ಷ 107 ಜನ ಮಕ್ಕಳು ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಲು ಇಚ್ಚಿಸುವ ಮಕ್ಕಳಿಗೆ 30 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಎಲ್ಲ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಸಮಾಜ ಮುಖ್ಯ ವಾಹಿನಿಗೆ ಬರಬೇಕು. ರಾಜ್ಯದ ಸಾವಿರ ಜನ ಮುಸಲ್ಮಾನ ಸಮಾಜದ ಆಟೊ ಚಾಲಕರಿಗೆ ಸರ್ಕಾರ ಹೊಸ ಆಟೊಗಳನ್ನು ಖರೀದಿಸಲು ₹3 ಲಕ್ಷ ರಿಯಾಯಿತಿ ನೀಡಿದ್ದೇವೆ ಎಂದರು.

ಶಾಲೆಯ ಅಧ್ಯಕ್ಷ ಸಮೀರ ಕಂಗನೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯ ವತಿಯಿಂದ ಬಿಎಎಂಎಸ್‌ ಮೆಡಿಕಲ್‌ ಕಾಲೇಜು, ನೂರು ಹಾಸಿಗೆ ಆಸ್ಪತ್ರೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಆ ಕಾಲೇಜಿಗೆ ಸಚಿವ ಜಮೀರ ಅಹ್ಮದ್‌ ಖಾನ್‌ ಹೆಸರನ್ನು ಇಡಲಾಗುವುದು ಹೇಳಿದರು.

ಓಲೆಮಠದ ಆನಂದ ದೇವರು, ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಜಿ ಇಲಾಹಿ ಕಂಗನೊಳ್ಳಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ವಕ್ಫ್‌ಬೋಲ್ಡ್‌ನ ಆಯ್ಕೆ ಸಮಿತಿಯ ಅಧ್ಯಕ್ಷ ಕೆ. ಅನ್ವರ ಬಾಷಾ, ಡಿಎಸ್‌ಪಿ ಸೈಯದ್‌ ರೋಶನ್‌ ಜಮೀರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.