ರಬಕವಿ ಬನಹಟ್ಟಿ: ನಗರದಲ್ಲಿ ಸೋಮವಾರದಿಂದ ಜೋಕುಮಾರ ಸ್ವಾಮಿಯ ಪೂಜೆ ಮನೆ ಮನೆಗಳ ಮುಂದೆ ನಡಯುತ್ತಿದ್ದು, ಅದೇ ರೀತಿಯಾಗಿ ಜೋಕುಮಾರ ಸ್ವಾಮಿಯ ಹಾಡುಗಳು ಕೇಳಿ ಬರುತ್ತಿವೆ.
ಇಲ್ಲಿಯ ತಳವಾರ ಸಮಾಜದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ಬೇವಿನ ಎಲೆಗಳಿಂದ ಸಿಂಗಾರ ಮಾಡಿರುತ್ತಾರೆ. ನಂತರ ಬುಟ್ಟಿಯನ್ನು ಹೊತ್ತುಕೊಂಡು ಮನೆ ಮನೆಗೆ ತರಳಿ, ಮನೆಯ ಮುಂದಿನ ಕಟ್ಟೆಗಳ ಮೇಲೆ ಬುಟ್ಟಿಯನ್ನು ಇಟ್ಟು, ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡುತ್ತಾರೆ.
ಸುತ್ತಲಿನ ಮಹಿಳೆಯರು ಮೊರದಲ್ಲಿ ರೊಟ್ಟಿ, ಕಾಯಿಪಲ್ಲೆ, ಖಾರ, ಎಣ್ಣೆ, ಜೋಳ, ಅಕ್ಕಿ, ಮೆಣಸಿನಕಾಯಿ ಹಾಗೂ ಬೆಣ್ಣೆಯನ್ನು ಇಟ್ಟುಕೊಂಡು ಬಂದು ನೈವೇದ್ಯ ಸಲ್ಲಿಸುತ್ತಾರೆ.
ನಂತರ ಮೊರದಲ್ಲಿ ಪ್ರಸಾದವನ್ನು ಹಾಕಿ ಜೋಕುಮಾರ ಸ್ವಾಮಿಯ ಮೂರ್ತಿಗೆ ಹಚ್ಚಿದ ಬೆಣ್ಣೆಯನ್ನು ಬೇವಿನ ತಪ್ಪಲಿಗೆ ಹಾಕಿ ಕೊಡುತ್ತಾರೆ.
ಜೋಕುಮಾರ ಸ್ವಾಮಿಯು ಅಭಿವೃದ್ಧಿ ಮತ್ತು ಫಲವತ್ತತೆಯ ಸಂಕೇತವಾಗಿದ್ದಾನೆ. ಗಣೇಶ ಹೋದ ನಂತರ ಜೋಕುಮಾರ ಪೂಜೆ ಎಲ್ಲೆಡೆ ನಡೆಯುತ್ತದೆ.
ಜೋಕುಮಾರ ಸ್ವಾಮಿಯ ಆಚರಣೆ ಇನ್ನೂ ಉಳಿದುಕೊಂಡು ಬಂದಿರುವುದು ವಿಶೇಷವಾಗಿದೆ. ಇಂಥ ವಿಶೇಷ ಆಚರಣೆಗಳ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಿದರೆ ಮಾತ್ರ ಆಚರಣೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಜೋಕುಮಾರನ ಪೂಜೆಯ ಸಂದರ್ಭದಲ್ಲಿ ಹಾಡುವ ಹಾಡುಗಳ ದಾಖಲೀಕರಣ ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ನೀಡಬೇಕು ಎಂದು ನಿವೃತ್ತ ಹಿರಿಯ ಗ್ರಂಥಪಾಲಕ ವೈ.ಬಿ. ಕೊರಡೂರ ತಿಳಿಸಿದರು.
‘ಜೇಡರ ಓಣ್ಯಾಗ ಹೋಗ್ಯಾನ ನನ ಕುವರ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ ರೊಟ್ಟಿ ಕೊಟ್ಟ ಕಳಸರಿ ಜೋಕುಮಾರ, ಐಯ್ಯೋಗಳ ಓಣ್ಯಾಗ ಹೋಗ್ಯಾನ ನನ ಕುವರ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ, ಕಟ್ಟಿ ಬಿಟ್ಟ ಬರವಲ್ಲ ಜೋಕುಮಾರ ಹೋಳಗಿ ಕೊಟ್ಟ ಕಳಸರಿ ಜೋಕುಮಾರ...
ಹೀಗೆ ಹಾರೂರ ಓಣಿ, ಚಪ್ಪಾರರ ಓಣಿ, ಕುಂಬಾರರ ಓಣಿ ಸೇರಿದಂತೆ ಹಲವು ಹಾಡುಗಳು ಗಮನ ಸೆಳೆಯುತ್ತವೆ.
ಯಲ್ಲವ್ವ ತಳವಾರ, ಮಹಾದೇವಿ ತಳವಾರ, ಸರಸ್ವತಿ ತಳವಾರ, ಬಾಗವ್ವ ತಮದಡ್ಡಿ, ಸಾವಿತ್ರಿ ತಳವಾರ ಸೇರಿದಂತೆ ಹಲವರು ಹಾಡುಗಳನ್ನು ಹಾಡಿದರು.
ಭಾನುವಾರ ಜನ್ಮತಾಳಿದ ಜೋಕುಮಾರ ಸ್ವಾಮಿ ಜೋಕುಮಾರಸ್ವಾಮಿಯ ವಿಶೇಷ ಹಾಡುಗಳು ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.