ರಬಕವಿ-ಬನಹಟ್ಟಿ: ವಚನಕಾರ ಕಾಡಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಕಾಡಸಿದ್ಧೇಶ್ವರರ ರಥೋತ್ಸವ ಮಂಗಳವಾರ ಸಂಭ್ರಮ ಸಡಗರದಿಂದ ನಡೆಯಿತು.
ಜಮಖಂಡಿಯ ಪಟವರ್ಧನ ಮಹಾರಾಜರು 1949ರಲ್ಲಿ ನೀಡಿದ ಬೃಹತ್ ರಥದಲ್ಲಿ ಕಾಡಸಿದ್ಧೇಶ್ವರರ ಬೆಳ್ಳಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ರಥವನ್ನು ವಿದ್ಯುತ್ ದೀಪ, ಭಕ್ತರು ನೀಡಿದ ಬೃಹತ್ ಹೂ ಮಾಲೆಗಳಿಂದ ಮತ್ತು ಸಂಕಷ್ಠ ಮಾಲೆಗಳಿಂದ ಶೃಂಗಾರ ಮಾಡಲಾಗಿತ್ತು.
ಸಂಜೆ ಆರು ಗಂಟೆಗೆ ನಗರದ ಗಣ್ಯರು ಸಾಮೂಹಿಕ ಮಂಗಳಾರುತಿಯನ್ನು ನೆರವೇರಿಸಿದರು. ಸೇರಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಜೆ 8.15ಕ್ಕೆ ಕಾಡಸಿದ್ಧೇಶ್ವರ ಮಹಾರಾಜ ಕೀ ಜೈ, ಸಿದ್ಧರ ಸಿದ್ಧ ಕಾಡಸಿದ್ಧ ಎಂಬ ಜಯ ಘೋಷಣೆಗಳ ಮಧ್ಯದಲ್ಲಿ ಮಂಗಳವಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು.
ಮಧ್ಯಾಹ್ನ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಭಕ್ತರು ರಥದ ಮುಂಭಾಗದಲ್ಲಿ ಮದ್ದು ಸುಡುವ ಕಾರ್ಯಕ್ರಮ ನಡೆಸಿದರು. ಅಂದಾಜು ₹ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ದ ಅನ್ನು ಸುಡುವ ಮೂಲಕ ಭಕ್ತರು ಹರಕೆ ಪೂರೈಸಿದರು.
ಕರಡಿ, ಸಂಬಾಳ, ಡೊಳ್ಳು, ಹಲಗೆ, ಶಹನಾಯಿ ವಾದನಗಳ ಜೊತೆಗೆ ಡೊಳ್ಳಿನ ಪದಗಳು ರಥೋತ್ಸವಕ್ಕೆ ಸಾಂಸ್ಕೃತಿಕ ಕಳೆಯನ್ನು ನೀಡಿದ್ದವು.
ನಗರದ ಪ್ರಮುಖರಾದ ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ಮಲ್ಲಿಕಾರ್ಜುನ ತುಂಗಳ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಸಿದ್ದು ಕೊಣ‍್ಣೂರ, ಧ್ರುವ ಜತ್ತಿ, ಬಸವರಾಜ ಜಾಡಗೌಡ, ಪ್ರಶಾಂತ ಕೊಳಕಿ, ಕಿರಿಣ ಆಳಗಿ, ಸಿಪಿಐ ನಾಗೇಶ ಕಾಡದೇವರ, ಧರೆಪ್ಪ ಉಳ್ಳಾಗಡ್ಡಿ, ಶಿರಸ್ತೆದಾರ ಎಸ್.ಬಿ. ಕಾಂಬಳೆ ಭೀಮಶಿ ಮಗದುಮ್, ರಾಜೇಂದ್ರ ಭದ್ರನವರ, ಮೀನಾಕ್ಷಿ ಸವದಿ, ಗೌರಿ ಮಿಳ್ಳಿ, ರಜನಿ ಶೇಠೆ, ಶ್ರೀಶೈಲ ಬೀಳಗಿ, ಸಿದ್ರಾಮ ಸವದತ್ತಿ, ಅರ್ಚರಕರಾದ ದುಂಡಯ್ಯ ಕಾಡದೇವರ, ಕಾಡಯ್ಯ ಕಾಡದೇವರ, ಅಶೋಕ ಕಾಡದೇವರ, ನಿಜಗುಣಯ್ಯ ಕಾಡದೇವರ, ಸೇರಿದಂತೆ ರಬಕವಿ ಬನಹಟ್ಟಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.