ADVERTISEMENT

ಬನಹಟ್ಟಿ: ಸಂಭ್ರಮದ ಕಾಡಸಿದ್ಧೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:17 IST
Last Updated 17 ಸೆಪ್ಟೆಂಬರ್ 2025, 4:17 IST
ಬನಹಟ್ಟಿಯ ಕಾಡಸಿದ್ಧೇಶ್ವರರ ಜಾತ್ರೆಯ ಅಂಗವಾಗಿ ನಿರ್ಮಾಣ ಮಾಡಲಾದ ನಿಜರೂಪಿ ಕಾಡಸಿದ್ಧೇಶ್ವರರ ಬುತ್ತಿ ಪೂಜೆ ಭಕ್ತರ ಗಮನ ಸೆಳೆಯಿತು
ಬನಹಟ್ಟಿಯ ಕಾಡಸಿದ್ಧೇಶ್ವರರ ಜಾತ್ರೆಯ ಅಂಗವಾಗಿ ನಿರ್ಮಾಣ ಮಾಡಲಾದ ನಿಜರೂಪಿ ಕಾಡಸಿದ್ಧೇಶ್ವರರ ಬುತ್ತಿ ಪೂಜೆ ಭಕ್ತರ ಗಮನ ಸೆಳೆಯಿತು   

ರಬಕವಿ ಬನಹಟ್ಟಿ: ಸ್ಥಳೀಯ ಕಾಡಸಿದ್ಧೇಶ್ವರರ ಜಾತ್ರೆ ಮಂಗಳವಾರ ಸಡಗರದಿಂದ ನಡೆಯಿತು.

ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ನಿಜರೂಪಿ ಕಾಡಸಿದ್ಧೇಶ್ವರರ ಬುತ್ತಿ ಪೂಜೆ ಮಾಡಲಾಗಿತ್ತು. ಬುತ್ತಿ ಪೂಜೆಯು ನೂರಾರು ಭಕ್ತರ ಗಮನ ಸೆಳೆಯಿತು.

ಜಿಟಿ ಜಿಟಿ ಮಳೆಯ ಮಧ್ಯದಲ್ಲಿಯೇ ಸೋಮವಾರ ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ಪೂರೈಸಿದರು.

ADVERTISEMENT

ಜಾತ್ರೆಗೆ ಹರಿದು ಬಂದ ಭಕ್ತ ಸಾಗರ

ಜಾತ್ರೆಗೆ ರಬಕವಿ– ಬನಹಟ್ಟಿ ಹಾಗೂ ಸುತ್ತಮುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಅಪಾರ ಸಂಖ್ಯೆಯ ಭಕ್ತ ಸಾಗರ ಹರಿದು ಬಂದಿತು.

ಬನಹಟ್ಟಿಯ ಕಾಡಸಿದ್ಧೇಶ್ವರರ ಜಾತ್ರೆಯ ಅಂಗವಾಗಿ ದೇವರ ದರ್ಶನ ಪಡೆಯಲು ಭಕ್ತರು ಸರತಿಯಲ್ಲಿ ನಿಂತಿದ್ದರು

ದಿನವಿಡೀ ಪ್ರಸಾದ ಸೇವೆ

ಜಾತ್ರೆಯ ಅಂಗವಾಗಿ ಸೋಮವಾರ ಮಧ್ಯ ರಾತ್ರಿಯಿಂದಲೇ ಆರಂಭಗೊಂಡ ಪ್ರಸಾದ ಸೇವೆ ಮಂಗಳವಾರ ಮಧ್ಯ ರಾತ್ರಿಯವರೆಗೆ ನಿರಂತರವಾಗಿ ನಡೆಯಿತು. ರೊಟ್ಟಿ, ಸಾರು, ಶಿರಾ ಮತ್ತು ಅನ್ನ ಪ್ರಸಾದ ವಿತರಣೆ ಮಾಡಲಾಯಿತು.

ಭಕ್ತರು ಬಟಾಟೆ ವಡಾ, ಇಡ್ಲಿ, ಪುರಿ ಬಾಜಿ, ಶಿರಾ, ಉಪ್ಪಿಟ್ಟು, ಬೂಂದಿ ಕಾಳು, ಬೂಂದಿ ಉಂಡಿ, ಜಾಮೂನು, ಬಾದಾಮಿ ಹಾಲು, ಮಸಾಲೆ ಅನ್ನ, ಬಿಸಿ ಬೇಳೆ ಬಾತ್, ಚಾಹಾ, ಕಾಫಿ, ಕಲ್ಲಂಗಡಿ ಜ್ಯೂಸ್ ನೀಡಿದರು. ಅಂದಾಜು ಐವತ್ತು ಕ್ವಿಂಟಲ್ ನಷ್ಟು ಪ್ರಸಾದ ಸೇವೆಯನ್ನು ಭಕ್ತರು ನಡೆಸಿಕೊಟ್ಟರು.

ಹೂ ಮಾಲೆ ಮಾರಾಟ

ಜಾತ್ರೆಯಲ್ಲಿ ಲಕ್ಷಾಂತರ ಮೌಲ್ಯದ ಹೂ ಮತ್ತು ಹೂ ಮಾಲೆಗಳು ಮಾರಾಟಗೊಂಡವು. ಭಕ್ತರು ಬೃಹತ್ ಗುಲಾಬಿ ಹೂ ಮಾಲೆಗಳನ್ನು ಖರೀದಿಸಿ ದೇವಸ್ಥಾನಕ್ಕೆ ಮತ್ತು ರಥಕ್ಕೆ ನೀಡಿದರು. ಇಲ್ಲಿ ಹೂ ಮಾಲೆಗಳನ್ನು ಮಾರಾಟ ಮಾಡಲು ರಾಮದುರ್ಗ, ಬೆಳಗಾವಿ, ಜಮಖಂಡಿ, ಮುಧೋಳ ವಿಜಯಪುರದ ವ್ಯಾಪಾರಸ್ಥರು ಆಗಮಿಸಿದ್ದರು ಎಂದು ಹೂ ವ್ಯಾಪಾರಸ್ಥ ಮಹಾಂತೇಶ ಹೂಗಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.