ADVERTISEMENT

ಕಸಾಪ ಸಭೆ: ನಿಯಮಗಳು ಅನ್ವಯ..

5ರಂದು ಕಲ್ಹಳ್ಳಿಯಲ್ಲಿ ಸಭೆ * ಫೋಟೊ, ವಿಡಿಯೊ ತೆಗೆಯುವಂತಿಲ್ಲ, ಏರುಧ್ವನಿಯಲ್ಲಿ ಮಾತನಾಡುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:26 IST
Last Updated 28 ಸೆಪ್ಟೆಂಬರ್ 2025, 23:26 IST
   

ಬಾಗಲಕೋಟೆ: ವಾರ್ಷಿಕ ಸಭೆಯಲ್ಲಿ ಆಡಿಯೊ, ವಿಡಿಯೊ ಚಿತ್ರೀಕರಣ ಮಾಡಿ
ಕೊಳ್ಳುವಂತಿಲ್ಲ. ಚಿತ್ರ ತೆಗೆದುಕೊಳ್ಳುವಂತಿಲ್ಲ. ಏರುಧ್ವನಿಯಲ್ಲಿ ಮಾತನಾಡಬಾರದು.

ಇದು ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಘಟಕ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲ್ಹಳ್ಳಿಯ ಸತ್ಯಕಾಮ ಪ್ರತಿಷ್ಠಾನದ ಸುಮ್ಮನೆ ಸಭಾಂಗಣದಲ್ಲಿ ಅಕ್ಟೋಬರ್ 5ರಂದು ನಡೆಸುವ ‘ವಾರ್ಷಿಕ ಸಾಮಾನ್ಯ ಸಭೆ’ಯಲ್ಲಿ ಭಾಗವಹಿಸುವ ಸದಸ್ಯರಿಗೆ ವಿಧಿಸಲಾಗಿರುವ ಸೂಚನೆಗಳು.

‘ಕಡ್ಡಾಯವಾಗಿ ಪರಿಷತ್ತಿನ ಗುರುತಿನ ಚೀಟಿ ಅಥವಾ ಯಾವುದಾದರೂ ಒಂದು ಗುರುತಿನ ಚೀಟಿ ತರಬೇಕು. ಭೌತಿಕವಾಗಿ ಹಾಜರಾಗಲು ಆಗದವರು ‘ಜೂಮ್‌’ ಮೂಲಕ ಆನ್‌ಲೈನ್‌ನಲ್ಲಿ ಸಭೆಗೆ ಹಾಜರಾಗಬಹುದು’ ಎಂದು ಸಭೆಯ ತಿಳಿವಳಿಕೆ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆದ ವಾರ್ಷಿಕ, ವಿಶೇಷ ಸಾಮಾನ್ಯ ಸಭೆ ನಡವಳಿಯ ದೃಢೀಕರಣ, 2023–24ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳ ಮಂಡನೆ, 2024–25ನೇ ಸಾಲಿನ ಪರಿಷತ್ತಿನ ಕಾರ್ಯಚಟುವಟಿಕೆಗಳು, ಕ್ರಿಯಾಯೋಜನೆ ಹಾಗೂ ವಾರ್ಷಿಕ ಬಜೆಟ್‌ಗೆ ಅನುಮೋದನೆ ಪಡೆಯಲಾಗುವುದು.

2024–25ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ, ಅವರ ಸಂಭಾವನೆ ನಿಗದಿ, ಸದಸ್ಯರು ನಿಯಮಾನುಸಾರ ಕಳುಹಿಸಿರುವ ಇತರೆ ಸೂಚನೆ, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮದಡಿ ನಡೆದಿರುವ ವಿಚಾರಣೆಗೆ ನೀಡಬೇಕಾದ ಮಾಹಿತಿ ದಾಖಲೆ, ಕಸಾಪ ವಿರುದ್ಧ ಬಂದಿರುವ ದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಿರುವ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆ ನಡೆಸಲು ಕೇಂದ್ರ ಘಟಕದ ಅಧ್ಯಕ್ಷ ಮಹೇಶ ಜೋಶಿ ಮುಂದಾಗಿದ್ದರು. ಆಕ್ಷೇಪ ವ್ಯಕ್ತವಾದ ನಂತರ ಸಹಕಾರ ಸಂಘಗಳ ಉಪನಿಬಂಧಕರು ಸಭೆ ರದ್ದು ಪಡಿಸಿದ್ದರು. 

ಅಗತ್ಯ ಸೌಲಭ್ಯಗಳಿಲ್ಲದ ಸ್ದಳದಲ್ಲಿ ಸಭೆ ನಡೆಸಬಾರದು ಎಂದು ಹಲವಾರು ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸಭೆ ಆಯೋಜಿಸಿರುವ ಸ್ಥಳವೂ ಒಂದೆರಡು ಸಾವಿರ ಜನ ಕೂರಲು ಅವಕಾಶವಿದೆ. ಪರಿಷತ್ತು 4 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.