ಮಹಾಲಿಂಗಪುರ: ಪಟ್ಟಣದ ಕೆಂಗೇರಿಮಡ್ಡಿಯ ಸಾಯಿ ಮಂದಿರ ಹಿಂಭಾಗದ ಕೆರೆ ಹತ್ತಿರ ಕಂದಾಯ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಹಾಕಿಕೊಂಡಿದ್ದ 33 ಪತ್ರಾಸ್ ಶೆಡ್‍ಗಳನ್ನು ತಹಶೀಲ್ದಾರ್ ಗಿರೀಶ ಸ್ವಾದಿ ನೇತೃತ್ವದಲ್ಲಿ ಮಂಗಳವಾರ ತೆರವುಗೊಳಿಸಲಾಯಿತು.
ಕೆಂಗೇರಿಮಡ್ಡಿಯ ಸರ್ವೇ ನಂ.29/1 ರಲ್ಲಿನ 3 ಎಕರೆ 6 ಗುಂಟೆ ಖಾಲಿ ಜಾಗವನ್ನು ನಿವೇಶನ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ತಹಶೀಲ್ದಾರ್ ತನಿಖೆ ನಡೆಸಿದ್ದರು. ಈ ಖಾಲಿ ಜಾಗ ಕಂದಾಯ ಇಲಾಖೆಗೆ ಸೇರಿದ್ದು, ಇಲ್ಲಿ ಅನಧಿಕೃತವಾಗಿ ಪತ್ರಾಸ್ ಶೆಡ್ ನಿರ್ಮಿಸಿಕೊಂಡಿದ್ದನ್ನು ಪರಿಶೀಲಿಸಿದ ಅವರು, ತೆರವು ಕಾರ್ಯಾಚರಣೆ ನಡೆಸಲು ಮುಂದಾದರು.
ಮೂರು ಜೆಸಿಬಿ ಮೂಲಕ ಪತ್ರಾಸ್ ಶೆಡ್‍ಗಳನ್ನು ತೆರವು ಮಾಡಲಾಯಿತು. ಡಿವೈಎಸ್‍ಪಿ ಎಸ್.ರೋಷನ್ ಜಮೀರ್, ಸಿಪಿಐ ಸಂಜೀವ ಬಳೆಗಾರ ನೇತೃತ್ವದಲ್ಲಿ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು. ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹಾಗೂ ಹೆಸ್ಕಾಂ ಅಧಿಕಾರಿ ರಾಜೇಶ ಬಾಗೋಜಿ ನೇತೃತ್ವದಲ್ಲಿ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
‘ಕೆಂಗೇರಿಮಡ್ಡಿಯ ಕಂದಾಯ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ 33 ಶೆಡ್‍ಗಳನ್ನು ತೆರವು ಮಾಡಲಾಗಿದೆ. ಖಾಲಿ ಜಾಗವನ್ನು ಸುಪರ್ದಿಗೆ ತೆಗೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಪುರಸಭೆಗೆ ಹಸ್ತಾಂತರಿಸಲಾಗುವುದು’ ಎಂದು ತಹಶೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.
ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ನಿವಾಸಿಗಳು, ‘ಈ ಖಾಲಿ ಜಾಗದಲ್ಲಿ ಪತ್ರಾಸ್ ಹಾಕಿಕೊಂಡು ಅಂದಾಜು 20 ವರ್ಷಗಳಿಂದ ಕುಟುಂಬ ಸಮೇತ ವಾಸಿಸುತ್ತಿದ್ದೇವೆ. ಕಡುಬಡವರಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಆದರೆ, ಈಗ ಇದ್ದಕ್ಕಿದ್ದಂತೆ ತಮ್ಮನ್ನು ತೆರವುಗೊಳಿಸುತ್ತಿರುವುದು ಸರಿಯಲ್ಲ’ ಎಂದು ಅಧಿಕಾರಿಗಳ ಎದುರು ಗೋಗರೆದರು. ಶೆಡ್ ತೆರವು ನೋಡಿ ಕೆಲ ಮಹಿಳೆಯರು ನಿತ್ರಾಣಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.