ADVERTISEMENT

ಕೆರೂರ: ಕಾಂಗ್ರೆಸ್‍ನ ಮಂಜುಳಾ ಅಧ್ಯಕ್ಷೆ

ಬಹುಮತ ಇಲ್ಲದಿದ್ದರೂ ಮೀಸಲಾತಿ ಅನ್ವಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:36 IST
Last Updated 19 ಅಕ್ಟೋಬರ್ 2020, 16:36 IST
ಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಕಾಂಗ್ರೆಸ್‍ನ ಮಂಜುಳಾ ತಿಮ್ಮಾಪೂರ ಹಾಗೂ ಉಪಾಧ್ಯಕ್ಷ ಬಿಜೆಪಿಯ ವಿ.ಜಿ. ಐಹೊಳ್ಳಿ ವಿಜಯದ ಸಂಕೇತ ತೋರಿಸಿದರು. ಸಂಸದ ಪಿ.ಸಿ. ಗದ್ದಿಗೌಡರ ಇದ್ದಾರೆ
ಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಕಾಂಗ್ರೆಸ್‍ನ ಮಂಜುಳಾ ತಿಮ್ಮಾಪೂರ ಹಾಗೂ ಉಪಾಧ್ಯಕ್ಷ ಬಿಜೆಪಿಯ ವಿ.ಜಿ. ಐಹೊಳ್ಳಿ ವಿಜಯದ ಸಂಕೇತ ತೋರಿಸಿದರು. ಸಂಸದ ಪಿ.ಸಿ. ಗದ್ದಿಗೌಡರ ಇದ್ದಾರೆ   

ಕೆರೂರ: 20 ಸದಸ್ಯ ಬಲದ ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮಂಜುಳಾ ಎಂ ತಿಮ್ಮಾಪೂರ (ಎಸ್‍ಟಿ ಮಹಿಳೆ ಮೀಸಲು) ಅಧ್ಯಕ್ಷೆ ಹಾಗೂ ಬಿಜೆಪಿಯ ವಿಜಯಕುಮಾರ ಜಿ ಐಹೊಳ್ಳಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿ ಸುಹಾಸ ಇಂಗಳೆ ಚುನಾವಣಾ ಪ್ರಕ್ರಿಯೆ ನಡೆಸಿ ಅಧಿಕೃತ ಘೋಷಣೆ ಮಾಡಿದರು.

ಬೆಂಬಲಿತರು ಸೇರಿ 12 ಸದಸ್ಯ ಬಲದ ಬಹುಮತವಿದ್ದರೂ ‘ಮೀಸಲಾತಿ’ ಯ ನಿಗದಿ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ದಕ್ಕದ ಅಸಮಾಧಾನ ಮಧ್ಯೆಯೇ ಬಿಜೆಪಿ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಮಾಧಾನಪಟ್ಟುಗೊಂಡಿತು. ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ತಿಮ್ಮಾಪೂರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿ.ಜಿ. ಐಹೊಳ್ಳಿ, ಕಾಂಗ್ರೆಸ್‍ನ ಬಸವರಾಜ ಹರಣಶಿಕಾರಿ ಸೇರಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಹರಣಶಿಕಾರಿ ನಾಮಪತ್ರ ಹಿಂಪಡೆದ ಕಾರಣ ಎರಡೂ ಸ್ಥಾನ ಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಆಯ್ಕೆ ವೇಳೆ ಸ್ವತಃ ಹಾಜರಿದ್ದ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪಕ್ಷೇತರರಾಗಿ ಚುನಾಯಿತರಾಗಿದ್ದ ಮೂವರು ಸದಸ್ಯರು (ವಿ.ಜಿ. ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಪ್ರಮೋದ ಪೂಜಾರ ) ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನು ಪಕ್ಷಭೇದ ಮರೆತು ಪಟ್ಟಣದ ಅಭಿವೃದ್ಧಿಗೆ ಪರಸ್ಪರ ಕೈಜೋಡಿಸುವ ಮೂಲಕ ಪ್ರಗತಿಗೆ ಸಹಕರಿಸಬೇಕು ಎಂದರು.

ADVERTISEMENT

ಇದೇ ವೇಳೆ ನೂತನ ಅಧ್ಯಕ್ಷೆ ಮಂಜುಳಾರನ್ನು ಸತ್ಕರಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು, ಶಾಸಕ ಸಿದ್ದರಾಮಯ್ಯ ನಾಯಕತ್ವದಲ್ಲಿ ಈ ತಾಲ್ಲೂಕಿನ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಅಗತ್ಯ
ಅನುದಾನ ತಂದು ಪಟ್ಟಣದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮೂಲಕ ಮತದಾರರು ನೀಡಿದ ಅಧಿಕಾರದ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ನಂತರ ಉಭಯ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆ, ದೇಗುಲಗಳ ವರೆಗೆ ಮೆರವಣಿಗೆ ನಡೆಯಿತು.

ಚುನಾಯಿತ 20 ಜನ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಎನ್.ಬಿ. ಬನ್ನೂರ, ಡಾ.ಎಂ.ಜಿ. ಕಿತ್ತಲಿ, ಬಿ.ಬಿ. ಸೂಳಿಕೇರಿ, ವಿ.ಎಂ. ಗೌಡರ, ಡಾ.ಬಿ.ಕೆ. ಕೋವಳ್ಳಿ, ಉಸ್ಮಾನಸಾಬ ಅತ್ತಾರ, ಸುರೇಶ ಪೂಜೇರಿ, ಸುಭಾಸ ಪೂಜಾರ, ಮೋದಿನಸಾಬ ಚಿಕ್ಕೂರ ಮತ್ತು ಬಿಜೆಪಿ ಧುರೀಣ ರಾಚಪ್ಪ ಶೆಟ್ಟರ, ಸದಾನಂದ ಮದಿ, ಪರಶುರಾಮ ಮಲ್ಲಾಡದ, ವಕೀಲ ಎಚ್.ಬಿ. ಪ್ರಭಾಕರ, ಶಂಕರ ಕೆಂಧೂಳಿ, ಗೋಪಾಲ ಪೂಜಾರ, ನಾಗೇಶ ಛತ್ರಬಾನ, ಆನಂದ ಪರದೇಶಿ ಸೇರಿದಂತೆ ಎರಡೂ ಪಕ್ಷಗಳ ನೂರಾರು ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.