
ಜಮಖಂಡಿ: ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕೊಣ್ಣೂರ ತೋಟ–2 ಶಾಲೆ ಗಮನಸೆಳೆಯುತ್ತಿದೆ.
ಮುಖ್ಯಶಿಕ್ಷಕ ಹಾಗೂ ಎಸ್‌ಡಿಎಂಸಿ ಪ್ರಯತ್ನದಿಂದ ಶಾಲೆ ಅಭಿವೃದ್ಧಿ ಮಾಡಲಾಗಿದ್ದು, ಹಾಜರಾತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಡುಗೆಗೆ ತಾಜಾ ತರಕಾರಿ ಬೆಳೆಯುವ ತೋಟ, ಆವರಣದಲ್ಲಿ ಬೆಳೆದ ಬಾಳೆ ಹಣ್ಣಿನ ಗಿಡಗಳಿಂದ ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ವಿತರಣೆ, ಆವರಣ ತುಂಬ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಆಕರ್ಷಣೆಯಾಗುವಂತೆ ಮಾಡಿದ್ದಾರೆ.
ಪ್ರತಿ ಶಾಲಾ ಕೋಠಡಿಯಲ್ಲಿ ಟಿವಿ ಹಾಕಿದ್ದು ಅದಕ್ಕೆ ಅಂತರ್ಜಾಲವನ್ನು ನೀಡಿದ್ದರಿಂದ ಟಿವಿ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವದು ತಾಲ್ಲೂಕಿನ ಕೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಣ್ಣೂರ ತೋಟ-2 ಶಾಲೆಯ ವಿಶೇಷತೆಯಾಗಿದೆ.
1 ರಿಂದ 8ನೇ ತರಗತಿ ಓದುತ್ತಿರುವ ಈ ಶಾಲೆಯಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಕೇವಲ 35-40 ವಿದ್ಯಾರ್ಥಿಗಳಿದ್ದರು, ಮಕ್ಕಳ ಕೊರತೆಯಿಂದ ಬಳಲುತ್ತಿರುವ ಶಾಲೆಯನ್ನು ಮುಖ್ಯಗುರು ಶ್ರೀಶೈಲ ಗಸ್ತಿಯವರ ಪ್ರಯತ್ನ ಹಾಗೂ ಎಸ್ ಡಿಎಂಸಿ ಸದಸ್ಯರ ಬೆಂಬಲದಿಂದ ಇಂದು ತೋಟದ ಶಾಲೆಯಲ್ಲಿ 120 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವದು ವಿಶೇಷ.
ಮುಖ್ಯಗುರು ಸೇರಿ ಐದು ಜನ ಶಿಕ್ಷಕರಿದ್ದು ಇದರಲ್ಲಿ ಇಬ್ಬರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಪ್ರಯತ್ನದಿಂದ ಕಳೆದ ವರ್ಷ ಈ ಶಾಲೆಯಿಂದ 5 ಜನ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಈ ಶಾಲೆಯ ವಿದ್ಯಾರ್ಥಿನಿ ಚಿನ್ನವ್ವ ಗುಳಬಾಳ ಗುಂಡು ಎಸೆತ ಹಾಗೂ ಚೇತನ ಕಣಗರ 10ಸಾವಿರ ಮೀಟರ್ ಓಟದಲ್ಲಿ ರಾಷ್ಟ್ರಮಟ್ಟದವರೆಗೆ ಸ್ಪರ್ಧೆ ನೀಡಿದ್ದಾರೆ.
ಶಿಕ್ಷಕರ ಹಾಗೂ ಎಸ್‌ಡಿಎಂಸಿ ಪ್ರಯತ್ನದಿಂದ ಕೊಣ್ಣೂರ ಗ್ರಾಮ ಪಂಚಾಯತಿಯಿಂದ ವಿದ್ಯಾರ್ಥಿಗಳಿಗೆ ಶೌಚಾಲಯ, ಕಂಪೌಂಡ, ಸಂಪೂರ್ಣ ಶಾಲೆಗೆ ಬಣ್ಣ ಹಚ್ಚುವದು ಹಾಗೂ ಕುಂಬಿ ನಿರ್ಮಾಣ ಮಾಡಿದ್ದಾರೆ.
ಇನ್ನೂ ಎಸ್ ಡಿಎಂಸಿ ಸದಸ್ಯರು ಸೇರಿ ಯುಪಿಎಸ್ ಹಾಗೂ ಮೈಕಸೆಟ್ ನೀಡಿದ್ದು, ಬೆಂಗಳೂರ ನಮ್ಮ ಆಶಾಕಿರಣ ಸಂಸ್ಥೆಯವರು ಎರಡು ಟಿವಿ ನೀಡಿದ್ದು, ಪಿಕೆಪಿಎಸ್ ವತಿಯಿಂದ ಎರಡು ಟಿವಿ ಹಾಗೂ ಮುಖ್ಯಗುರು ಶ್ರೀಶೈಲ ಗಸ್ತಿ ಸ್ವತಹ ಎರಡು ಟಿವಿ ನೀಡಿದ್ದರಿಂದ ಪ್ರತಿ ಕೊಠಡಿಯಲ್ಲಿ ಟಿವಿ ವ್ಯವಸ್ಥೆ ಮಾಡಿದ್ದು, ಹೊಸ ಶೌಚಾಲಯ ನಿರ್ಮಾಣ ಸೇರಿದಂತೆ ಅಂದಾಜು ₹20 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದಾಖಲಾತಿ ಹೆಚ್ಚಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ ಆವರಣದಲ್ಲಿ ತರಕಾರಿ ಹಾಗೂ ಬಾಳೆಹಣ್ಣು ಬೆಳೆದು ಮಕ್ಕಳಿಗೆ ನೀಡಲಾಗುತ್ತಿದೆ ವಿವಿಧ ಕಡೆಗಳಿಂದ ವಂತಿಗೆ ಪಡೆದು ಶಾಲೆ ಅಭಿವೃದ್ಧಿ ಮಾಡಲಾಗುತ್ತಿದೆನಿಂಗಪ್ಪ ತಮಾಣಿ ಎಸ್‌ಡಿಎಂಸಿ ಅಧ್ಯಕ್ಷ
ಪ್ರತಿತಿಂಗಳು ತಪ್ಪದೆ ಪಾಲಕರ ಸಭೆಯನ್ನು ನಡೆಸಲಾಗುತ್ತದೆ ಮಕ್ಕಳ ಗುಣಮಟ್ಟವನ್ನು ಪಾಲಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆಶ್ರೀಶೈಲ ಗಸ್ತಿ ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.