ADVERTISEMENT

ಕೂಡಲಸಂಗಮದ ಬಸವಣ್ಣನ ಐಕ್ಯಸ್ಥಳ ದರ್ಶನ: ಮಕ್ಕಳಿಂದಲೂ ಶುಲ್ಕ ವಸೂಲಿ!

ಶ್ರೀಧರ ಗೌಡರ
Published 18 ಡಿಸೆಂಬರ್ 2023, 7:54 IST
Last Updated 18 ಡಿಸೆಂಬರ್ 2023, 7:54 IST
ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದ ವಿದ್ಯಾರ್ಥಿಗಳು
ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದ ವಿದ್ಯಾರ್ಥಿಗಳು   

ಕೂಡಲಸಂಗಮ: ಇಲ್ಲಿರುವ ಬಸವಣ್ಣನ ಐಕ್ಯಸ್ಥಳ ದರ್ಶನಕ್ಕೆ ಸರ್ಕಾರ 1 ರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿದೆ. ಆದರೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಿಬ್ಬಂದಿ ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳಿಂದಲೂ ಪ್ರವೇಶ ಶುಲ್ಕ ಪಡೆಯುವ ಮೂಲಕ ಶೋಷಣೆಗೆ ಇಳಿದಿರುವುದು ಕಂಡು ಬರುತ್ತಿದೆ.

2017ರಲ್ಲಿ ಬೆಂಗಳೂರಿನ ಮುಖ್ಯ ಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ನಡೆದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ 13ನೇ ಸಭೆಯಲ್ಲಿ ಅಂದಿನ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ 1 ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ಮಂಡಳಿಯ ಆಯುಕ್ತರಿಗೆ ಸೂಚಿಸಿದ್ದರು. ಆನಂತರ ಮಂಡಳಿಯು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿತ್ತು. ಶಾಲಾ ಮಕ್ಕಳಿಗೆ ಉಚಿತ ಎಂಬ ನಾಮಫಲಕವನ್ನು ಹಾಕಿದ್ದರು. ಕೆಲವು ದಿನಗಳಿಂದ ಮಂಡಳಿಯ ಸಿಬ್ಬಂದಿ ಆ ನಾಮಫಲಕವನ್ನು ತೆಗೆದು ಹಾಕಿದ್ದಾರೆ.

‘ಟಿಕೆಟ್‌ ಕೊಡುವ ಮಂಡಳಿಯ ಸಿಬ್ಬಂದಿ ಉಚಿತ ಪ್ರವೇಶ ಇಲ್ಲ, ಎಲ್ಲರಿಂದಲೂ ಟಿಕೆಟ್‌ ಪಡೆಯಲು ನಮ್ಮ ಅಧಿಕಾರಿಗಳು ಸೂಚಿಸಿದ್ದಾರೆ ನಾನು ಪಡೆಯುತ್ತಿದ್ದೆನೆ. ಬೇಕಾದರೆ ಅಧಿಕಾರಿಗಳನ್ನು ಕೇಳಿ’ ಎಂದು ಹೇಳುತ್ತಿದ್ದಾರೆ.

ADVERTISEMENT

‘ಬಸವಣ್ಣನ ಐಕ್ಯ ಕ್ಷೇತ್ರ ದರ್ಶನಕ್ಕೆ ಬರುವ ಶಾಲಾ ಮಕ್ಕಳಿಂದಲೂ ಪ್ರವೇಶ ಶುಲ್ಕ ₹5 ಪಡೆಯುತ್ತಿದ್ದಾರೆ. ಪ್ರವೇಶ ಟಿಕೇಟ ಕೊಡುವುದಿಲ್ಲ, ಟಿಕೇಟ ಕೊಡಿ ಎಂದು ಕೇಳಿದರೆ ಮಾತ್ರ ಟಿಕೇಟ ಕೊಡುವರು. ಬಸವಣ್ಣನ ಐಕ್ಯಸ್ಥಳದಲ್ಲಿಯೇ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ಮಕ್ಕಳ ಶೋಷಣೆಗೆ ಇಳಿದಿರುವುದು ಇಲ್ಲಿಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಲಾ ಮಕ್ಕಳಿಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಮಾಡುತ್ತಿರುವ ಶೋಷಣೆಯನ್ನು ತಡೆದು ಉಚಿತ ಪ್ರವೇಶ ಕಲ್ಪಿಸಬೇಕು‘ ಎಂದು ಚಿತ್ರದುರ್ಗದ ಪ್ರವಾಸಿ ಉಮೇಶ ಲಮಾಣಿ ಒತ್ತಾಯಿಸಿದರು.

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಕಳೆದ 17 ದಿನಗಳಿಂದ ಆರಂಭಗೊಂಡಿದ್ದು ನಿತ್ಯ ಸುಕ್ಷೇತ್ರದ ದರ್ಶನಕ್ಕೆ 10 ರಿಂದ 15 ಸಾವಿರ ಮಕ್ಕಳು ಬರುವರು. ಆ ಎಲ್ಲ ಮಕ್ಕಳಿಗೂ ಮಂಡಳಿಯ ಅಧಿಕಾರಿಗಳು ಪ್ರವೇಶ ಶುಲ್ಕ ವಸೂಲಿ ಮಾಡುವ ಮೂಲಕ ಶೋಷಣೆ ಮಾಡುತ್ತಿದ್ದಾರೆ ಎಂದು ಜನರು ಚರ್ಚಿಸುವಂತಾಗಿದೆ.

ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ಪಡೆಯುತ್ತಿರುವ ಮಂಡಳಿಯ ಸಿಬ್ಬಂದಿ
ಮಂಡಳಿಯ 13ನೇ ಸಭೆಯಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲು ನಿರ್ಣಯಿಸಿದ ಪ್ರತಿ
ಮಕ್ಕಳಿಂದಲೂ ಶುಲ್ಕ ವಸೂಲಿ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ಪರಿಶೀಲಿಸುತ್ತೇನೆ
ಬಸಪ್ಪ ಪೂಜಾರಿ ಆಯುಕ್ತರು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕೂಡಲಸಂಗಮ
‘ಶಿಸ್ತು ಕ್ರಮ ಕೈಗೊಳ್ಳಿ’
ಬಸವಾದಿ ಶರಣರ ದಾರ್ಶನಿಕ ಸಂತರ ಸ್ವತಂತ್ರ ಹೋರಾಟಗಾರರ ಐತಿಹಾಸಿಕ ಸ್ಥಳವನ್ನು ಸರ್ಕಾರವೇ ಉಚಿತವಾಗಿ ನೋಡಲು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ವಿಶ್ವಕ್ಕೆ ಗುರುವಾಗಿದ್ದ ಬಸವಣ್ಣನ ಐಕ್ಯಮಂಟಪ ದರ್ಶನಕ್ಕೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇದ್ದರೂ ಮಂಡಳಿಯ ಅಧಿಕಾರಿಗಳೇ ಪ್ರವೇಶ ಶುಲ್ಕ ವಸೂಲಿ ಮಾಡುವ ಮೂಲಕ ಮಕ್ಕಳ ಶೋಷಣೆಗೆ ಇಳಿದಿರುವುದು ದುರಂತ. ಶೋಷಣೆ ತಡೆಯಬೇಕಾದ ಮಂಡಳಿಯೇ ಶೋಷಣೆಗೆ ಇಳಿದರೇ ಏನು ಮಾಡಬೇಕು. ಮಂಡಳಿಯ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಶಿಸ್ತು ಕ್ರಮಕೈಗೊಂಡು ಮಕ್ಕಳಿಗೆ ಆಗುತ್ತಿರುವ ಶೋಷಣೆ ತಡೆಯಬೇಕು. - ಬಸವಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.