ಮಲಪ್ರಭಾ ನದಿ ದಡದಲ್ಲಿರುವ ಬಟ್ಟೆ, ತ್ಯಾಜ್ಯವಸ್ತುಗಳು
ಬಾಗಲಕೋಟೆ: ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಈ ಭಾಗದ ಜನರ ಜೀವನಾಡಿಯಾಗಿವೆ. ಆದರೆ, ಅದೇ ಜನರು ಅವುಗಳನ್ನು ಕಲುಷಿತಗೊಳಿಸುತ್ತಿದ್ದಾರೆ. ಅದನ್ನು ತಡೆಯಬೇಕಾಗಿದ್ದ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ಕೊಳಚೆ ನೀರು, ಕಾರ್ಖಾನೆಗಳ ತ್ಯಾಜ್ಯ, ಕಟ್ಟಡಗಳ ತ್ಯಾಜ್ಯ, ರಾಶಿ, ರಾಶಿ ಭಕ್ತರ ಬಟ್ಟೆಗಳು ನದಿ ನೀರನ್ನು ಕಲುಷಿತಗೊಳಿಸುತ್ತವೆ. ಅದೇ ನೀರನ್ನು ನದಿ ತೀರದ ನೂರಾರು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಮೂಲವಾಗಿದೆ.
ಇಳಕಲ್, ಹುನಗುಂದ, ಬಾದಾಮಿ ಸೇರಿದಂತೆ ಹಲವು ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರನ್ನು ಎರಡೂ ನದಿಗಳಿಂದ ಸರಬರಾಜು ಮಾಡಲಾಗುತ್ತಿದೆ. ನದಿಯಿಂದ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆಯಾದರೂ, ಜನರು ಕುಡಿಯಲು ನೀರನ್ನು ಈ ನೀರನ್ನು ಬಳಸುತ್ತಿಲ್ಲ. ಪರಿಣಾಮ ಬಾಗಲಕೋಟೆ ಸೇರಿದಂತೆ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತಿವೆ.
ಜಲಜೀವನ್ ಮಿಷನ್‌ನಡಿ ಕುಡಿಯುವ ನೀರಿನ ಯೋಜನೆಗೆ ಬಹಳಷ್ಟು ಕಡೆ ಕೃಷ್ಣಾ ಹಾಗೂ ಮಲಪ್ರಭಾ ನೀರನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಹಲವಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ನೀರು ಕಲುಷಿತಗೊಳ್ಳದಂತೆ ಕ್ರಮಕೈಗೊಳ್ಳುವಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಬಟ್ಟೆಯದ್ದೇ ಬಹುದೊಡ್ಡ ಸಮಸ್ಯೆ
ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ನಿತ್ಯ ಸಾವಿರಾರು ಭಕ್ತರು ಬರುವರು. ಬಹುತೇಕರು ಪುಣ್ಯಸ್ನಾನ ಮಾಡುತ್ತಾರೆ. ಕೆಲವು ಭಕ್ತರು ಬಟ್ಟೆಗಳನ್ನು ನದಿಯಲ್ಲಿಯೇ ಬಿಟ್ಟು ಹೋಗುವುದರಿಂದ ನದಿ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದೆ. ಸ್ವಚ್ಚತೆ ಕಾರ್ಯವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಹೊರಗುತ್ತಿಗೆ ಕಾರ್ಮಿಕರು ನಿತ್ಯ ಮಾಡಿದರೂ ತಡೆಯುವ ಕಾರ್ಯ ಆಗುತ್ತಿಲ್ಲ.
ಬಾದಾಮಿ ಬನಶಂಕರಿ, ಸವದತ್ತಿಯ ಯಲ್ಲಮನಗುಡ್ಡದ ಜಾತ್ರೆ ಮುಗಿದ ಒಂದು ವಾರ ಕೃಷ್ಣಾ, ಮಲಪ್ರಭಾ ನದಿಯ ತೀರ ಭಂಡಾರದಿಂದ ತುಂಬಿ ಹೋಗುತ್ತದೆ. ಹುಣ್ಣಿಮೆ, ಅಮವಾಸ್ಯೆ ಬಂದರೆ ನದಿಯ ದಡ ಕಾಲಿಡದಂತೆ ಬಟ್ಟೆಗಳ ರಾಶಿಯೇ ಬಿದ್ದಿರುತ್ತದೆ.
ಶಬರಿಮಲೆ ಅಯ್ಯಪ್ಪ, ಆಂಜನಾದ್ರಿ ಬೆಟ್ಟ, ಸಂಗಮನಾಥ ಮಾಲಾಧಾರಿಗಳು ಇಲ್ಲಿಗೆ ಬಂದು, ಪುಣ್ಯಸ್ನಾನ ಮಾಡಿ ತಾವು ಉಟ್ಟ ಬಟೆಗಳನ್ನು ನದಿಗೆ ಬಿಡುವುದರಿಂದ ನದಿಯು ಕಲುಷಿತವಾಗುತ್ತಿದೆ. ಕೆಲವು ಭಕ್ತರು ಮನೆಯಲ್ಲಿ ಪೂಜೆ ಮಾಡಿದ ವಸ್ತುಗಳನ್ನು ನದಿಗೆ ಎಸೆಯುವರು, ಇನ್ನೂ ಕೆಲವರು ಭಗ್ನಮೂರ್ತಿಗಳನ್ನು ನದಿಗೆ ಎಸೆದ ಪರಿಣಾಮ ನದಿ ಮಲಿನವಾಗುತ್ತಿದೆ.
ದರ್ಶನಕ್ಕೆ ಬಂದ ಕೆಲವು ಭಕ್ತರು ದೇವಾಲಯ ಆವರಣದ ಪೌಳಿಗಳಲ್ಲಿ ಕುಳಿತು ಊಟ ಮಾಡಿ, ಊಟದ ಪ್ಲಾಸ್ಟಿಕ್ ತಟ್ಟೆಗಳನ್ನು ನದಿಗೆ ಎಸೆಯುವರು. ಇನ್ನೂ ಕೆಲವರು ಕೃಷ್ಣಾ, ಮಲಪ್ರಭಾ ನದಿ ದಡದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವರು. ರಥ ಬೀದಿ ಬಳಿಯ ಕೃಷ್ಣಾ ನದಿಯ ದಡ ಮಲಮೂತ್ರ ವಿಸರ್ಜನೆಯ ತಾಣವಾಗಿದೆ. ಪ್ಲಾಸ್ಟಿಕ್ ಬಾಟಲಗಳು ನದಿಯ ದಡದಲ್ಲಿ ಬಿದ್ದಿವೆ. ಕೆಲವು ಕಡೆ ನದಿಯ ದಡ ಗಬ್ಬು ನಾರುವುದು.
‘ಪುಣ್ಯಸ್ನಾನ ಮಾಡಿದ ಭಕ್ತರು ನದಿಯಲ್ಲಿ ಬಟ್ಟೆ ಬಿಡಬಾರದು, ಯಾರೂ ತ್ಯಾಜ್ಯವಸ್ತುಗಳನ್ನು ನದಿಗೆ ಎಸೆಯಬಾರದು’ ಎಂಬ ನಾಮಫಲಕವನ್ನು ಮಂಡಳಿ ನದಿಯ ದಡದಲ್ಲಿ ಅಳವಡಿಸಿದರೂ ಪ್ರಯೋಜನವಾಗಿಲ್ಲ.
ದೇವಾಲಯ ಹೊರ ಆವರಣದಲ್ಲಿ ಎರಡು ಶೌಚಗೃಹಗಳು ಇದ್ದು, ತ್ಯಾಜ್ಯ ವಿಲೇವಾರಿ ಮಾಡಲು ಮಂಡಳಿ 20 ವರ್ಷಗಳ ಹಿಂದೆ ಎರಡು ಕಿ.ಮೀ ದೂರದಲ್ಲಿ ವಿಲೇವಾರಿ ಘಟಕ ಮಾಡಿತ್ತು. ನಿರ್ವಹಣೆ ಕೊರತೆಯಿಂದ ವಿಲೇವಾರಿ ಘಟಕ ಸ್ಥಗಿತಗೊಂಡಿದ್ದು. ಕೆಲವು ದಿನಗಳಿಂದ ಶೌಚಗೃಹದ ತ್ಯಾಜ್ಯವು ನದಿಗೆ ಸೇರುತ್ತಿದೆ ಎಂದು ಭಕ್ತರು, ಗ್ರಾಮಸ್ಥರು ಆರೋಪಿಸುವರು. ಕೂಡಲಸಂಗಮ ಗ್ರಾಮ ಪಂಚಾಯಿತಿ ಗ್ರಾಮದ ಚರಂಡಿ ನೀರನ್ನು ನದಿಗೆ ಬಿಟ್ಟಿದೆ.
ಪೂಜಾ ಸಾಮಗ್ರಿ ನದಿ ಪಾಲು
ದಾಂಪತ್ಯಕ್ಕೆ ಕಾಲಿಟ್ಟ ನೂತನ ಜೋಡಿಗಳು ಬಾಸಿಂಗವನ್ನು ನದಿಗಳ ಸಂಗಮವಾದ ಇಲ್ಲಿಯೇ ವರ್ಷದುದ್ದಕ್ಕೂ ಬಿಡುವರು. ಉತ್ತರ ಕರ್ನಾಟಕದ ಬಹುತೇಕ ಜನರು ಚಿತಾಭಸ್ಮದ ವಿಸರ್ಜನೆ ಸಹ ಮಾಡುತ್ತಾರೆ. ಸಂಗಮನಾಥನಿಗೆ ದೀಡ ನಮಸ್ಕಾರ ಹಾಕುವ ಭಕ್ತರು ಜವಳಕ್ಕೆ ಬಂದ ಭಕ್ತರು ಬಟ್ಟೆಗಳನ್ನು ನದಿಯಲ್ಲಿಯೇ ಬಿಡುವರು. ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ನದಿಗೆ ಭಕ್ತರು ಬಿಟ್ಟ ಬಟ್ಟೆಗಳು ನದಿ ಇಳಿಮುಖಗೊಳ್ಳುತ್ತಿದ್ದಂತೆ ದರ್ಶನವಾಗುತ್ತವೆ. ನದಿಯ ದಡಕ್ಕೆ ಕಾಲಿಡದಂತೆ ಬಟ್ಟೆಗಳು ಭಗ್ನಗೊಂಡ ಮೂರ್ತಿಗಳು ಭಾವಚಿತ್ರಗಳು ಬಿದ್ದಿರುತ್ತವೆ. ದುರ್ಗವ್ವ ದ್ಯಾಮವ್ವ ಮುಂತಾದ ದೇವರ ಪಲ್ಲಕ್ಕಿಯೊಂದಿಗೆ ಆಗಮಿಸುವ ಭಕ್ತರು ನದಿಯ ದಂಡೆಯಲ್ಲಿ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆವರವೇರಿಸಿ ನದಿಗೆ ವಿವಿಧ ವಸ್ತುಗಳನ್ನು ಬಿಡುವರು. ಗಣೇಶೋತ್ಸವದ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮದ ಜನರು ಗಣೇಶ ಮೂರ್ತಿಗಳನ್ನು ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಬಟ್ಟೆಗಳನ್ನು ನದಿಗೆ ಬಿಟ್ಟರೆ ದಂಡ ವಿಧಿಸಲಾಗುವುದು ಎಂದು ಫಲಕ ಹಾಕಲಾಗಿದೆ. ಆದರೆ ಇಲ್ಲಿಯವರೆಗೂ ಯಾರಿಗೂ ದಂಡ ವಿಧಿಸಿಲ್ಲ.
ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ
ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ನದಿಯಲ್ಲಿ ಬಟ್ಟೆಗಳನ್ನು ಬಿಡದಂತೆ ತಡೆಯಲು ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯೂ ಈ ಕಾರ್ಯವನ್ನು ಸರಿಯಾಗಿ ಮಾಡದ್ದರಿಂದಾಗಿ ರಾಶಿ ರಾಶಿ ಬಟ್ಟೆಗಳು ನದಿಯ ಒಡಲು ಸೇರುತ್ತಿವೆ. ಲೋಕಾಸಭಾ ಚುನಾವಣೆಗೂ ಮುಂಚೆ ಜಿಲ್ಲಾಧಿಕಾರಿ ಜಾನಕಿ ಕೃಷ್ಣಾ ನದಿ ಸ್ವಚ್ಚತೆಗಾಗಿ ಆಗ ಉಪವಿಭಾಗಾಧಿಕಾರಿಯಾಗಿದ್ದ ಶ್ವೇತಾ ಬಿಡಿಕರ್ ಅವರಿಗೆ ಸೂಚಿಸಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನದಿಯ ಸ್ವಚ್ಚತೆ ಅರಿವು ಮೂಡಿಸುವ ಜೊತೆಗೆ ಸ್ವಚ್ಚತೆ ಕಾರ್ಯ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಯೋಜನೆ ಜಾರಿಗೆ ಬರಲಿಲ್ಲ.
ನದಿ ದಡ ಸಂಪೂರ್ಣ ಬಟ್ಟೆಗಳಿಂದ ಕೂಡಿದೆ. ಸ್ವಚ್ಚತೆ ಮಾಡುವ ಕಾರ್ಯವನ್ನು ಮಂಡಳಿಯ ಸಿಬ್ಬಂದಿ ಮಾಡಬೇಕು. ಭಕ್ತರಿಗೆ ಬಟ್ಟೆಗಳನ್ನು ನದಿಗೆ ಬಿಡುವುದರಿಂದ ಆಗುವ ತೊಂದರೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು.ಜಿ. ಎಸ್. ನರೇಗಲ್, ಭಕ್ತರು ಶಿರೂರ
ನದಿ ಮಲಿನಗೊಳಿಸುವ ಕಾರ್ಯ ಯಾರೂ ಮಾಡಬಾರದು. ನದಿಯ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ನದಿಯ ದಡದಲ್ಲಿ ಮೌಢ್ಯ ಬಿತ್ತು ಯಾವ ಚಟುವಟಿಕೆಗಳಿಗೂ ಮಂಡಳಿ ಅವಕಾಶ ಕೊಡದೆ ತಡೆಯಬೇಕು.ಮಹದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ ಕೂಡಲಸಂಗಮ
ಜೀವನದಿಗಳು ಇತ್ತೀಚಿಗೆ ಮಾನವನ ನಿರ್ಲಕ್ಷ ವರ್ತನೆಯಿಂದ ಮಲಿನಗೊಳ್ಳುತ್ತಿವೆ. ನದಿಗಳನ್ನು ಪೂಜಿಸಿದರೆ ಸಾಲದು ಅವುಗಳು ಮಲಿನವಾಗದಂತೆ ಎಚ್ಚರ ವಹಿಸಿ ಸ್ವಚ್ಚಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಗಂಗಾ ನದಿ ಸಂರಕ್ಷಣೆ ಕಾರ್ಯ ಆರಂಭಿಸಿದಂತೆ ಇಲ್ಲಿಯೂ ಆರಂಭಿಸಬೇಕು.ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ
ಪ್ರಜಾವಾಣಿ ತಂಡ: ಬಸವರಾಜ ಹವಾಲ್ದಾರ, ಶ್ರೀಧರ ಗೌಡರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.