ADVERTISEMENT

ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ಗೊಂದಲ ಮೂಡಿಸಿದ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ಪರ್ಯಾಯ ನೀತಿ ಪ್ರಸ್ತಾಪ

ಬಸವರಾಜ ಹವಾಲ್ದಾರ
Published 14 ಅಕ್ಟೋಬರ್ 2025, 1:23 IST
Last Updated 14 ಅಕ್ಟೋಬರ್ 2025, 1:23 IST
ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ   

ಬಾಗಲಕೋಟೆ: ‘ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಪೂರ್ಣಗೊಳಿಸಲು ಅವಶ್ಯವಿರುವ ₹75 ಸಾವಿರ ಕೋಟಿ ಮೊತ್ತವನ್ನು ಮುಂದಿನ ನಾಲ್ಕು ಆರ್ಥಿಕ ವರ್ಷಗಳ ಅವಧಿಯಲ್ಲಿ ನೀಡಲಾಗುವುದು’ ಎನ್ನುವ ಮೂಲಕ ರಾಜ್ಯ ಸರ್ಕಾರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಮಾತಿಗೆ ತಪ್ಪಿದೆ ಎಂದು ರೈತರು ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಯುಕೆಪಿ ಯೋಜನೆ ಪೂರ್ಣಗೊಳಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದರು. ಆದರೆ, ಈಗ ಅವರು ಅದಕ್ಕೆ ಬದ್ಧರಾಗಿಲ್ಲ. ಭೂಸ್ವಾಧೀನ ಮತ್ತು ಪುನರ್‌ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಬೇಕಾದ ಅನುದಾನ ನೀಡಲು ಜಲಸಂಪನ್ಮೂಲ ಇಲಾಖೆ ಅವಧಿ ವಿಸ್ತರಿಸಿದೆ’ ಎಂದು ರೈತರು ಆರೋಪಿಸಿದ್ದಾರೆ.

2028 ಮಾರ್ಚ್‌ನಲ್ಲಿ ಬಜೆಟ್‌ ಮಂಡಿಸಿದರೂ ಹೊಸದಾಗಿ ಬರುವ ಸರ್ಕಾರ ಮತ್ತೇ ಬಜೆಟ್ ಮಂಡಿಸಲಿದೆ. ರಾಜ್ಯ ಸರ್ಕಾರಕ್ಕೆ ಇನ್ನೂ ಎರಡೇ ಬಜೆಟ್‌ ಮಂಡನೆಗೆ ಅವಕಾಶವಿದೆ. ಎರಡು ಬಜೆಟ್‌ಗಳಲ್ಲಿ ₹36 ಸಾವಿರ ಕೋಟಿ ಮಾತ್ರ ನೀಡಬಹುದು. ಉಳಿದ ಹಣಕ್ಕೆ ಮತ್ತೇ ಹೊಸ ಸರ್ಕಾರದತ್ತ ಸಂತ್ರಸ್ತರು ಮುಖ ಮಾಡಬೇಕಿದೆ.

ADVERTISEMENT

ಪರ್ಯಾಯ ನೀತಿ ಗೊಂದಲ: ಮುಳುಗಡೆಯಾಗುವ ಸಂತ್ರಸ್ತರಿಗೆ ಈವರೆಗೆ ಸರ್ಕಾರ ಮನೆ ಜಾಗಕ್ಕೆ ಬದಲಾಗಿ ನಿವೇಶನ, ಸಂತ್ರಸ್ತರ ಮಕ್ಕಳು 18 ವರ್ಷ ಮೇಲ್ಪಟ್ಟವರಿದ್ದರೆ ಅವರಿಗೂ ಪ್ರತ್ಯೇಕವಾಗಿ ನಿವೇಶನ ನೀಡಲಾಗುತ್ತಿತ್ತು. ಜೊತೆಗೆ ಮನೆಗೆ ಪರಿಹಾರ ನೀಡುತ್ತಿತ್ತು. ಪರ್ಯಾಯ ನೀತಿ ರೂಪಿಸಲು ಸೂಚಿಸಿರುವುದು ಸಂತ್ರಸ್ತರನ್ನು ಗೊಂದಲಕ್ಕೆ ದೂಡಿದೆ.

ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸುವ ಬದಲಾಗಿ ಪರಿಹಾರ ಪ್ಯಾಕೇಜ್‌ ನೀಡಲು ಪರ್ಯಾಯ ನೀತಿ ರೂಪಿಸುವಂತೆ ಭೂಸ್ವಾಧೀನ, ಪುನರ್‌ವಸತಿ ಮತ್ತು ಪುನರ್ ನಿರ್ಮಾಣದ ಆಯುಕ್ತ, ಕೃಷ್ಣಾ ಭಾಗ್ಯ ಜಲ ನಿಮಗದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

3ನೇ ಹಂತದಲ್ಲಿ ಬಾಗಲಕೋಟೆ ಒಂದಷ್ಟು ಭಾಗ ಹಾಗೂ 20 ಹಳ್ಳಿಗಳು ಮುಳುಗಡೆಯಾಗಲಿವೆ. ಅವುಗಳ ಪುನರ್‌ವಸತಿಗಾಗಿ 6,467 ಎಕರೆ ಭೂಮಿ ಬೇಕಿತ್ತು. ಈಗಾಗಲೇ 3,392 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಪರ್ಯಾಯ ನೀತಿ ಏನಿರಬಹುದು ಎಂಬುದು ರೈತರ ಪ್ರಶ್ನೆಯಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಸಂತ್ರಸ್ತರಿಗೆ ಮತ್ತು ರೈತರಿಗೆ ಅನುಕೂಲ ಮಾಡಿಕೊಡಬೇಕು
ಪ್ರಕಾಶ ಅಂತರಗೊಂಡ ಸಂಚಾಲಕ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.