ADVERTISEMENT

ಜಮಖಂಡಿ: ಮೈದುಂಬಿದ ಕೃಷ್ಣೆ; ನದಿ ತೀರದ ಜನರಲ್ಲಿ ಆತಂಕ

ಆರ್.ಎಸ್.ಹೊನಗೌಡ
Published 1 ಆಗಸ್ಟ್ 2025, 3:28 IST
Last Updated 1 ಆಗಸ್ಟ್ 2025, 3:28 IST
ಜಮಖಂಡಿ: ತಾಲ್ಲೂಕಿನ ಕಂಕಣವಾಡಿ ಗ್ರಾಮಕ್ಕೆ ಹೋಗುವ ರಸ್ತೆ ಕುಸಿದು ಟ್ರಕ್ ಬಿದ್ದಿರುವದು.
ಜಮಖಂಡಿ: ತಾಲ್ಲೂಕಿನ ಕಂಕಣವಾಡಿ ಗ್ರಾಮಕ್ಕೆ ಹೋಗುವ ರಸ್ತೆ ಕುಸಿದು ಟ್ರಕ್ ಬಿದ್ದಿರುವದು.   

ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಮೈದುಂಬಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನೀರಿನಮಟ್ಟದಿಂದ ನದಿ ತೀರದ ಕೆಲ ಗ್ರಾಮಗಳಲ್ಲಿನ ಜನರಲ್ಲಿ ಪ್ರವಾಹ ಭೀತಿ ಮೂಡಿಸಿದೆ.

ಹಿಂದಿನ ನಾಲ್ಕು ವರ್ಷಗಳಲ್ಲಿ ಜುಲೈ ಕೊನೆಯ ವಾರದಲ್ಲಿ ನದಿಯಲ್ಲಿನ ನೀರಿನ ಮಟ್ಟ ಹೆಚ್ಚಾಗುತ್ತಿತ್ತು, ಈ ಬಾರಿಯೂ ನೀರಿನ ಮಟ್ಟ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ.

ಸಮೀಪದ ಹಿಪ್ಪರಗಿ ಜಲಾಶಯದ ಗರಿಷ್ಟ ನೀರಿನ ಮಟ್ಟ 524.87 ಮೀಟರ್‌ ಇದ್ದು, ಒಟ್ಟು 6 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ, ಈಗಾಗಲೇ ಜಲಾಶಯದಲ್ಲಿ 3.5 ಟಿಎಂಸಿ ನೀರು ಸಂಗ್ರಹವಿದ್ದು ಜಲಾಶಯದಲ್ಲಿ 1.27ಲಕ್ಷ ಕ್ಯೂಸೆಕ್ ನೀರು ಒಳಹರಿವು ಮತ್ತು ಹೊರಹರಿವು ಇದೆ.

ADVERTISEMENT

ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ನಿರ್ಮಿಸಿರುವ ತಾಲ್ಲೂಕಿನ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರ ಮಂಗಳವಾರ ಸಂಪೂರ್ಣವಾಗಿ ಜಲಾವೃತ್ತವಾಗಿದೆ.

‘ಕಾಯಿಸಿ ಕುಡಿಯಿರಿ’:  ನೀರು ರಭಸವಾಗಿ ಹರಿದು ಬರುತ್ತಿರುವುದರಿಂದ ನೀರು ಕಲ್ಮಶವಾಗಿ ಬರುತ್ತಿದ್ದು, ನೀರನ್ನು ಬಳಸುವ ನದಿ ತೀರದ ಜನರು ಕಾಯಿಸಿ, ಸೋಸಿ ಕುಡಿಯಬೇಕು, ಮಿತವಾಗಿ ಬಳಕೆ ಮಾಡಿ ಮತ್ತು ರಾಜಾಪೂರ ಡ್ಯಾಮ್ ಹಾಗೂ ಕಲ್ಲೋಳ್ಳಿ ಬ್ಯಾರೇಜ್‌ನಿಂದ 1.11 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬೀಡುತ್ತಿರುವುದರಿಂದ ನೀರಿನ ರಭಸ ಮತ್ತಷ್ಟು ಜೋರಾಗಿರುತ್ತದೆ, ಸಾರ್ವಜನಿಕರು ನದಿಯೊಳಗೆ ಇಳಿಯಬಾರದು ಎಂದು ನದಿ ತೀರದ ಗ್ರಾಮಗಳಲ್ಲಿ ತಾಲ್ಲೂಕಾಡಳಿತ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಹಶೀಲ್ದಾರ್‌ ಅನೀಲ ಬಡಿಗೇರ ತಿಳಿಸಿದರು.

ತಹಶೀಲ್ದಾರ ಅನೀಲ ಬಡಿಗೇರ 

ರಸ್ತೆ ಕುಸಿತ: ಸಂಚಾರಕ್ಕೆ ತೊಂದರೆ 

ಕೃಷ್ಣಾ ನದಿಗೆ ಹೊಂದಿಕೊಂಡಿರುವ ಕಂಕಣವಾಡಿ ಗ್ರಾಮಕ್ಕೆ ಹೋಗುವ ರಸ್ತೆ ಕುಸಿದಿದ್ದು ಗ್ರಾಮದ ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಗೂಡ್ಸ್ ವಾಹನ ಕಂಕಣವಾಡಿ ಗ್ರಾಮಕ್ಕೆ ಹೋಗುವಾಗ ನೀರಿನಲ್ಲಿ ನೆನೆದಿರುವ ರಸ್ತೆ ಕುಸಿದು ಗೂಡ್ಸ್ ವಾಹನ ನೀರಿನಲ್ಲಿ ಬಿದ್ದಿದೆ ಅದೃಷ್ಟವಶಾತ್‌ ಚಾಲಕ ಪಾರಾಗಿದ್ದಾನೆ. ಕಂಕಣವಾಗಿ ಗ್ರಾಮಕ್ಕೆ ಹೋಗುವ ಮುನ್ನ ನದಿಯ ಒತ್ತು ಇದ್ದು ನದಿಯಲ್ಲಿ ಸ್ವಲ್ಪ ಪ್ರಮಾಣದ ನೀರು ಹೆಚ್ಚಾದರೆ ರಸ್ತೆ ಸಂಪೂರ್ಣವಾಗಿ ಜಲಾವೃತವಾಗುತ್ತದೆ ಗ್ರಾಮಕ್ಕೆ ಮುಖ್ಯ ರಸ್ತೆ ಇದೇ ಆಗಿರುವುದರಿಂದ ಗ್ರಾಮದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ.

ರಸ್ತೆ ಚಿಕ್ಕದಾಗಿರುವದರಿಂದ ಎದುರಿಗೆ ಬೇರೆ ವಾಹನಗಳು ಬಂದರೆ ಸಂಚರಿಸಲು ಆಗುವದಿಲ್ಲ ರಸ್ತೆಯ ಎರಡು ಬದಿಗೆ ಯಾವುದೇ ಸುರಕ್ಷತೆ ಇಲ್ಲದಿರುವದರಿಂದ ಜನರು ಅಪಾಯದಲ್ಲಿ ಸಾಗುವ ಅನಿವಾರ್ಯತೆ ಇದೆ. ಕಳೆದ ವರ್ಷ ಈ ರಸ್ತೆ ಜಲಾವೃತವಾಗಿರುವುದರಿಂದ ಒಬ್ಬ ರೈತ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದರು ಹಾಗೂ ನಾಲ್ಕೈದು ವರ್ಷಗಳ ಹಿಂದೆ ಒಬ್ಬರು ಸಾವನಪ್ಪಿದ್ದರು ನಮ್ಮ ಗ್ರಾಮಕ್ಕೆ ಈ ರಸ್ತೆ ಅನಿವಾರ್ಯವಾಗಿರುವದರಿಂದ ಹಲವಾರು ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಕೂಡಲೇ ರಸ್ತೆ ಎತ್ತರಿಸಿ ಸೇತುವೆ ನಿರ್ಮಿಸಬೇಕು ಎಂದು ರೈತ ಈಶ್ವರ ಕರಬಸನ್ನವರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.