ADVERTISEMENT

ರಬಕವಿ ಬನಹಟ್ಟಿ: ಕೃಷಿಯಲ್ಲಿ ಖುಷಿ ಕಂಡ ದಂಪತಿ

20 ಗುಂಟೆ ಜಮೀನಿನಲ್ಲಿ ನಿತ್ಯ ₹2 ಸಾವಿರ ಆದಾಯ

ವಿಶ್ವಜ ಕಾಡದೇವರ
Published 5 ಏಪ್ರಿಲ್ 2024, 5:29 IST
Last Updated 5 ಏಪ್ರಿಲ್ 2024, 5:29 IST
ರಬಕವಿ ಬನಹಟ್ಟಿ ಸಮೀಪದ ಯಲ್ಲಟ್ಟಿಯ ರಸ್ತೆ ಮಧ್ಯದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ದಂಪತಿ ದಯಾನಂದ ಹಾಗೂ ಪ್ರೀತಿ ಹೊರಟ್ಟಿ
ರಬಕವಿ ಬನಹಟ್ಟಿ ಸಮೀಪದ ಯಲ್ಲಟ್ಟಿಯ ರಸ್ತೆ ಮಧ್ಯದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ದಂಪತಿ ದಯಾನಂದ ಹಾಗೂ ಪ್ರೀತಿ ಹೊರಟ್ಟಿ   

ರಬಕವಿ ಬನಹಟ್ಟಿ: ಸಮೀಪದ ಯಲ್ಲಟ್ಟಿಯ ರಸ್ತೆ ಮಧ್ಯದಲ್ಲಿರುವ ತಮ್ಮ 20 ಗುಂಟೆ ಜಮೀನಿನಲ್ಲಿ ಸಾವಯವ ಕೃಷಿ ಅವಲಂಬಿಸಿ ಸವತೆಕಾಯಿ, ಹಿರೇಕಾಯಿ ಮತ್ತು ಹಾಗಲಕಾಯಿಯನ್ನು ಬೆಳೆದ ರೈತ ದಂಪತಿ ದಯಾನಂದ ಮತ್ತು ಪ್ರೀತಿ ಹೊರಟ್ಟಿ ನಿತ್ಯ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಇವರ ಬೆಳೆ ತನ್ನದೇ ಆದ ಗ್ರಾಹಕರನ್ನು ಗಿಟ್ಟಿಸಿಕೊಂಡಿದೆ. ಗ್ರಾಹಕರೇ ನೇರವಾಗಿ ಅವರ ತೋಟಕ್ಕೆ ಬಂದು ಸವತೆ ಮತ್ತು ಹಿರೇಕಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ಔಷಧ ಮತ್ತು ಗೊಬ್ಬರಗಳ ವೆಚ್ಚವಿಲ್ಲದೇ ಬೆಳೆದ ಬೆಳೆಯಿಂದ ನಿತ್ಯ ₹2,000 ಆದಾಯ ಗಳಿಸುತ್ತಿದ್ದಾರೆ.

ದಯಾನಂದ ಹೊರಟ್ಟಿ ತಮ್ಮ ಬೆಳೆಗೆ ಎರೆ ಜಲ, ಗೋಮೂತ್ರ, ಗೊಕೃಪಾಮೃತ, ಡಿಕಂಪೋಸರ್ ಮತ್ತು ಬಿವೇರಿಯಾಗಳನ್ನು ಬಳಸುತ್ತಿದ್ದಾರೆ. ಇವೆಲ್ಲವುಗಳನ್ನು ಅವರು ತಮ್ಮ ತೋಟದಲ್ಲಿಯೇ ತಯಾರಿಸಿಕೊಂಡು ಚಿಕ್ಕ ಬ್ಯಾರಲ್‌ಗಳಲ್ಲಿ ಸಂಗ್ರಹಿಸಿಟ್ಟುಕೊಂಡು ನಿಯಮಿತವಾಗಿ ಬೆಳೆಗಳಿಗೆ ನೀಡುತ್ತಿದ್ದಾರೆ.

ADVERTISEMENT

ದಯಾನಂದ ಮತ್ತು ಅವರ ಪತ್ನಿ ಪ್ರೀತಿ ಇಬ್ಬರೇ ತಮ್ಮ ಹೊಲದಲ್ಲಿ ದುಡಿಯುತ್ತಾರೆ. ಬೀಜಗಳನ್ನು ನಾಟಿ ಮಾಡುವುದರಿಂದ ಈಗ ಅವುಗಳನ್ನು ಮಾರಾಟ ಮಾಡುವವರೆಗೆ ಇಬ್ಬರೇ ದುಡಿಯುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಅವಲಂಬಿಸಿಲ್ಲ. ಸೂರ್ಯೋದಯಕ್ಕಿಂತ ಮೊದಲೇ ಎದ್ದು ಸವತೆ ಹಾಗೂ ಹಿರೇಕಾಯಿಗಳನ್ನು ಹರಿದು ಅವುಗಳನ್ನು ಬುಟ್ಟಿಗೆ ತುಂಬಿಸುವ ಕಾರ್ಯ ಮಾಡುತ್ತಾರೆ. ಬಿಸಿಲು ಏರುವವರೆಗೆ ದುಡಿದು ನಂತರ ಸಂಜೆ ಮತ್ತೆ ತೋಟಕ್ಕೆ ಇಳಿಯುತ್ತಾರೆ. ಇದು ಕೂಡಾ ಅವರ ಆದಾಯವನ್ನು ಹೆಚ್ಚಿಸಿದೆ.

ಸದ್ಯ ಸಾಕಷ್ಟು ಬಿಸಿಲು ಇದ್ದು ಸಾವಯವ ಗೊಬ್ಬರನ್ನು ಬಳಸುತ್ತಿರುವುದರಿಂದ ಮಾತ್ರ ಬೆಳೆ ಬದುಕಿದೆ ಎನ್ನುತ್ತಾರೆ ದಯಾನಂದ.

ಮುಂದಿನ ದಿನಗಳಲ್ಲಿ ಇನ್ನಷ್ಟು ತಾವೇ ತಯಾರಿಸಿದ ಸಾವಯವ ಗೊಬ್ಬರಗಳಿಂದ ಮತ್ತಷ್ಟು ತರಕಾರಿ ಬೆಳೆಯಲು ಯೋಜನೆಗಳನ್ನು ಹಾಕುತ್ತಿದ್ದಾರೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ರಾಮನಗೌಡ ಅವರ ಮಾರ್ಗದರ್ಶನದಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ.

ದಯಾನಂದ ಹೊರಟ್ಟಿ ಅವರು ಸಾವಯವ ಗೊಬ್ಬರಗಳನ್ನು ಸಣ್ಣ ಬ್ಯಾರಲ್‌ಗಳಲ್ಲಿ ಸಂಗ್ರಹಿಸಿಡುತ್ತಾರೆ
ಸಾವಯವ ಸವತೆಕಾಯಿಗಳು ಮಾರುಕಟ್ಟೆಗೆ ಸಿದ್ಧವಾಗಿರುವುದು

ಒಂದುವರೆ ಲಕ್ಷ ಆದಾಯ ನಿರೀಕ್ಷೆ

‘ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಎರೆ ಜಲವನ್ನು ಒಂದು ಲೀಟರ್‌ಗೆ ₹80 ರಿಂದ ₹100 ವರೆಗೆ ಮಾರಾಟ ಮಾಡುತ್ತಾರೆ. ಆದರೆ ದಯಾನಂದ ಒಂದು ಬ್ಯಾರಲ್‌ನಲ್ಲಿ ಎರೆಜಲ ಘಟಕವನ್ನು ಆರಂಭಿಸಿದ್ದು 15 ದಿನಕ್ಕೆ ಅಂದಾಜು 60 ಲೀಟರ್ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ. ಇನ್ನೂ ಗೋಕೃಪಾಮೃತವನ್ನು ಬಳ್ಳಿಗಳಿಗೆ ಸಿಂಪಡಿಸುವುದರಿಂದ ಹೂವು ಉತ್ತಮವಾಗಿ ಬರುವುದರ ಜೊತೆಗೆ ಕೀಟಗಳ ಕಾಟ ಕೂಡಾ ಕಡಿಮೆ ಮಾಡುತ್ತದೆ. ಇಲ್ಲಿಯವರೆಗೆ ಅಂದಾಜು ₹10 ಸಾವಿರ ಖರ್ಚು ಮಾಡಿದ್ದು ಮೂರು ತಿಂಗಳಲ್ಲಿ ಒಂದುವರೆ ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ನಿರೀಕ್ಷಿಸಿದ್ದೇನೆ’ ಎನ್ನುತ್ತಾರೆ ಕೃಷಿಕ ದಯಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.