ADVERTISEMENT

ಕೂಡಲಸಂಗಮ | ಪುನರ್ ವಸತಿ ಕೇಂದ್ರಗಳಲ್ಲಿ ನಿರುಪಯುಕ್ತವಾದ ಶಾಲಾ ಕಟ್ಟಡಗಳು

ಶ್ರೀಧರ ಗೌಡರ
Published 20 ಜನವರಿ 2025, 4:46 IST
Last Updated 20 ಜನವರಿ 2025, 4:46 IST
ಇದ್ದಲಗಿ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಿಸಿದ ಪ್ರೌಢ ಶಾಲಾ ಕಟ್ಟಡ
ಇದ್ದಲಗಿ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಿಸಿದ ಪ್ರೌಢ ಶಾಲಾ ಕಟ್ಟಡ   

ಕೂಡಲಸಂಗಮ: ಕೆಲವು ಕಡೆ ಶಾಲಾ ಕೊಠಡಿಗಳು ಇಲ್ಲದೇ ಮಕ್ಕಳ ಅಧ್ಯಯನಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲಸಂಗಮ ಸುತ್ತ–ಮುತ್ತಲಿನ ಪುನರ್ ವಸತಿ ಕೇಂದ್ರಗಳಲ್ಲಿ ಪುನರ್ ವಸತಿ, ಪುನರ್ ನಿರ್ಮಾಣ ಇಲಾಖೆ ಕೋಟ್ಯಂತರ ವೆಚ್ಚಮಾಡಿ ನಿರ್ಮಿಸಿದ ಶಾಲಾ ಕಟ್ಟಡಗಳು ಅನಾಥವಾಗಿವೆ. ಬಳಕೆಗೂ ಮುನ್ನವೇ ಅವನತಿ ಹಾದಿ ಹಿಡಿದಿವೆ.

ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಗೊಂಡ ಖಜಗಲ್, ಕೆಂಗಲ್, ವರಗೋಡದಿನ್ನಿ, ಇದ್ದಲಗಿ, ಬಿಸನಾಳಕೊಪ್ಪ, ಕಮದತ್ತ, ಅಡವಿಹಾಳ, ಕೆಸರಪೆಂಟಿ, ಅನಪಕಟ್ಟಿ, ತುರಡಗಿ, ಕಟಗೂರ, ಕೂಡಲಸಂಗಮ, ಧನ್ನೂರ ಮುಂತಾದ ಪುನರ್ ವಸತಿ ಕೇಂದ್ರದಲ್ಲಿ ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ಪ್ರಾಥಮಿಕ, ಪ್ರೌಢ ಶಾಲೆಗೆ ವಿಶಾಲವಾದ ಜಾಗ ಮೀಸಲಿಟ್ಟು, ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ. ಬಹುತೇಕ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಕಟ್ಟಡಗಳು ಬಳಕೆಯಾಗುತ್ತಿಲ್ಲ.

ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಕಟ್ಟಡಗಳು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿವೆ, ಮೂಲ ಸೌಲಭ್ಯಗಳು ಸಮಪರ್ಕವಾಗಿಲ್ಲ. ಅಲ್ಲಿಗೆ ಹೊಗಿ ತೊಂದರೆ ಅನುಭವಿಸುವುದಕ್ಕಿಂತ ಮೂಲ ಗ್ರಾಮದಲ್ಲಿಯೇ ಇದ್ದ ಮನೆಯನ್ನೇ ದುರಸ್ತಿ ಮಾಡಿಸಿಕೊಂಡು ಇದ್ದರಾಯಿತು ಎಂದು ಸಂತ್ರಸ್ಥರು ಮೂಲ ಗ್ರಾಮದಲ್ಲಿ ವಾಸ ಮಾಡುತ್ತಿರುವುದರಿಂದ ಶಾಲಾ ಕಟ್ಟಡಗಳು ನಿರುಪಯುಕ್ತವಾಗಿವೆ.

ADVERTISEMENT

ಇದ್ದಲಗಿ, ಅಡವಿಹಾಳ, ಖಜಗಲ್, ಕೆಂಗಲ್ ಕಡಪಟ್ಟಿ, ವರಗೋಡದಿನ್ನಿ, ಕೆಸರಪೆಂಟಿ, ಕಮದತ್ತ, ಅನುಪಕಟ್ಟಿ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡಗಳು ನಿರುಪಯುಕ್ತವಾಗಿವೆ. ಶಾಲಾ ಕೊಠಡಿಯ ಬಾಗಿಲುಗಳು ಕಿತ್ತು ಹೊಗಿದ್ದು, ನೆಲಹಾಸು ಕುಸಿದಿವೆ. ಕುಡುಕರಿಗೆ ನೆಚ್ಚಿನ ತಾಣವಾಗಿವೆ. ಕುರಿಗಾರರು ಮಳೆ ಬಂದರೆ ಶಾಲಾ ಕೊಠಡಿಗಳಲ್ಲಿ ಕುರಿಗಳನ್ನು ನಿಲ್ಲಿಸುವರು.

ಕೆಲವು ಶಾಲಾ ಕಟ್ಟಡಗಳನ್ನು ಖಾಸಗಿ ವ್ಯಕ್ತಿಗಳು ಧಾನ್ಯ ಇಡಲು ಬಳಸಿಕೊಳ್ಳುವರು. ಕಟ್ಟಡವನ್ನು ರಕ್ಷಿಸಬೇಕಾದ ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿಕುಳಿತುಕೊಂಡಿದ್ದಾರೆ. ಪ್ರತಿ ವರ್ಷ ದುರಸ್ತಿಗೆ ಎಂದು ಖರ್ಚು ದಾಖಲೆಗಳಲ್ಲಿ ಬಿಳುತ್ತಲೇ ಇದೆ. ಕಟ್ಟಡಗಳು ಮಾತ್ರ ಸ್ಮಾರಕಗಳಾಗಿವೆ ಎಂದು ಸಂತ್ರಸ್ತರು ದೂರುವರು.

ಕಟಗೂರ, ತುರಡಗಿ, ಧನ್ನೂರ, ಬಿಸನಾಳಕೊಪ್ಪ ಪುನರ್ ವಸತಿ ಕೇಂದ್ರಗಳಲ್ಲಿ ಶಾಲಾ ಕಟ್ಟಡಗಳು ಬಳಕೆಯಾಗುತ್ತಿದ್ದು, ಕೆಲವು ಕಡೆ ನೆಲಹಾಸು ಕಿತ್ತು ಹೊಗಿವೆ. ಸಮಪರ್ಕ ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಮಕ್ಕಳು ತೊಂದರೆ ಅನುಭವಿಸುವರು. ಕೂಡಲಸಂಗಮ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಪ್ರಾಥಮಿಕ ಶಾಲಾ ಕಟ್ಟಡವನ್ನು ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಗೆ ಬಳಸಿಕೊಂಡಿದ್ದಾರೆ. ಮೂಲ ಗ್ರಾಮದಲ್ಲಿಯೇ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಕೆಂಗಲ್ ಕಡಪಟ್ಟಿ, ಅಡವಿಹಾಳ, ಇದ್ದಲಗಿ ಗ್ರಾಮದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡಗಳು ಮುಳ್ಳುಕಂಠಿಯಲ್ಲಿ ಮುಚ್ಚಿವೆ.

ಕೆಂಗಲ್ ಕಡಪಟ್ಟಿ ಪುನರ್ ವಸತಿ ಕೇಂದ್ರದ ಶಾಲಾ ಕೊಠಡಿಯಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು
ಪುನರ್ ವಸತಿ ಕೇಂದ್ರಗಳಲ್ಲಿ ನಿರ್ಮಾಣವಾದ ಬಹುತೇಕ ಶಾಲಾ ಕಟ್ಟಡಗಳು ಬಳಕೆಯಾಗುತ್ತಿಲ್ಲ. ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ. ಬಳಕೆಗೂ ಮುನ್ನವೇ ಹಾಳಾಗಿವೆ.. ಸಮಗ್ರ ತನಿಖೆಯಾಗಬೇಕು
ಮಹಾಂತೇಶ ಕುರಿ ಯುವ ಮುಖಂಡ ಕೂಡಲಸಂಗಮ.

ನಿರುಪಯುಕ್ತ ವಸತಿ ಗೃಹ

ಪ್ರತಿ ಪುನರ್ ವಸತಿ ಕೇಂದ್ರದಲ್ಲಿ ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ₹62 ಲಕ್ಷ ವೆಚ್ಚಮಾಡಿ ಶಿಕ್ಷಕರ ಜೋಡಿ ವಸತಿ ಗೃಹ ನಿರ್ಮಿಸಿದೆ. ಶಾಲಾ ಶಿಕ್ಷಕರು ಪುನರ್ ವಸತಿ ಕೇಂದ್ರದಲ್ಲಿಯೇ ಇರಲು ವಸತಿ ಗೃಹ ನಿರ್ಮಿಸಿದೆ. ಆದರೆ ಬಹುತೇಕ ಕಡೆ ಶಿಕ್ಷಕರ ಜೋಡಿ ವಸತಿ ಗೃಹಗಳು ನಿರುಪಯುಕ್ತವಾಗಿವೆ. ಕೆಲವು ಕಡೆ ಖಾಸಗಿ ವ್ಯಕ್ತಿಗಳು ತಮ್ಮ ವೈಯಕ್ತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಶಿಥಿಲಾವಸ್ಥೆಯಲ್ಲಿ ಕಟ್ಟಡಗಳು

ತುರಡಗಿ ಗ್ರಾಮದ ಮಕ್ಕಳು 2006 ರಿಂದ 2012ವರೆಗೆ ಬಿಸನಾಳ ಕೊಪ್ಪದ ಶಾಲಾ ಮಕ್ಕಳು 2007 ರಿಂದ 2021ರವರೆಗೆ ತಗಡಿನ ಶೆಡ್ಡಿನಲ್ಲಿ ಶಾಲೆಯನ್ನು ಕಲಿತು ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಶಾಲೆಗೆ ಸ್ಥಳಾಂತರಗೊಂಡಿದ್ದಾರೆ. ಶಾಲಾ ಕೊಠಡಿಯ ಕೊರತೆಯಿಂದ ಕಟಗೂರ ಶಾಲೆ ಅನಿವಾರ್ಯವಾಗಿ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದೆ. ಕೆಂಗಲ್ ಖಜಗಲ್ ವರಗೋಡದಿನ್ನಿ ಅಡವಿಹಾಳ ಕಮದತ್ತ ಇದ್ದಲಗಿ ಕೆಸರಪೆಂಟಿ ಅನುಪಕಟ್ಟಿ ಮೂಲ ಗ್ರಾಮದಲ್ಲಿಯೇ ಶಾಲೆಗಳು ನಡೆಯುತ್ತಿವೆ. ಕೆಲವು ಕಡೆ ಕೊಠಡಿಗಳ ಕೊರತೆ ಇದೆ ಕೆಲವು ಕಡೆ ಶಿಥಿಲಾವಸ್ಥೆಯ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿವೆ.

ಹಸ್ತಾಂತರ ಮಾಡಿಕೊಳ್ಳಲು ಹಿಂದೇಟು

ಕಳಪೆ ಮಟ್ಟದ ಕಾಮಗಾರಿ ಆಗಿದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶಾಲಾ ಕಟ್ಟಡವನ್ನು ಪುನರ್ ವಸತಿ ಕೇಂದ್ರದ ಅಧಿಕಾರಿಗಳಿಂದ ಹಸ್ತಾಂತರ ಮಾಡಿಕೊಳ್ಳುತ್ತಿಲ್ಲ. ದಾಖಲೆಯಲ್ಲಿ ಇರುವ ಹಾಗೆ ಎಲ್ಲವನ್ನು ಸರಿಪಡಿಸಿ ಕೊಡಿ ಹಸ್ತಾಂತರ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ಅಧಿಕಾರಿಗಳು ಶಾಲಾ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ ಮಾಡಿರವುದರಿಂದ ದುರಸ್ತಿ ಮಾಡಲು ಆಗುತ್ತಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.