ADVERTISEMENT

ಬಸವ ತತ್ವ ವಿರೋಧಿಗಳಿಂದ ಕೂಡಲಸಂಗಮ ಅಭಿವೃದ್ಧಿ ಹೊಂದುತ್ತಿಲ್ಲ: ‍ಪಾಟೀಲ

39ನೇ ಶರಣ ಮೇಳ; ಲಿಂಗಾಯತ ಧರ್ಮ ಸಂಸ್ಥಾಪನಾ ದಿನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:38 IST
Last Updated 15 ಜನವರಿ 2026, 3:38 IST
39ನೇ ಶರಣ ಮೇಳದ ಲಿಂಗಾಯತ ಧರ್ಮ ಸಂಸ್ಥಾಪನ ದಿನ ಹಾಗೂ ಬಸವ ಕ್ರಾಂತಿ ದಿನಾಚರಣೆ ಸಮಾರಂಭ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ ಮಾಡಿದರು.
39ನೇ ಶರಣ ಮೇಳದ ಲಿಂಗಾಯತ ಧರ್ಮ ಸಂಸ್ಥಾಪನ ದಿನ ಹಾಗೂ ಬಸವ ಕ್ರಾಂತಿ ದಿನಾಚರಣೆ ಸಮಾರಂಭ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ ಮಾಡಿದರು.   

ಕೂಡಲಸಂಗಮ: ಅಧಿಕಾರಶಾಹಿ ವ್ಯವಸ್ಥೆ ದುರಾಡಳಿತ, ಬಸವತತ್ವ ವಿರೋಧಿಗಳಿಂದಾಗಿ  ಕೂಡಲಸಂಗಮ ಬಸವ ಅಂತರರಾಷ್ಟ್ರೀಯ ಕೇಂದ್ರ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಕೂಡಲಸಂಗಮದ ಬಸವ ಧರ್ಮ ಪೀಠ ಆವರಣದಲ್ಲಿ ಬುಧವಾರ ನಡೆದ 39ನೇ ಶರಣ ಮೇಳದ ಲಿಂಗಾಯತ ಧರ್ಮ ಸಂಸ್ಥಾಪನ ದಿನ ಹಾಗೂ ಬಸವ ಕ್ರಾಂತಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆ ನಾನು ಸೇರಿದಂತೆ ಹಲವರು ಒತ್ತಡ ತಂದು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತರರಾಷ್ಟ್ರೀಯ ಕೇಂದ್ರ ಅಭಿವೃದ್ಧಿ ಪಡಿಸಲು ₹139 ಕೋಟಿ ಅನುದಾನ ಬಿಡುಗಡೆಯಾಗುವಂತೆ ಮಾಡಿದೆವು. ಸರ್ಕಾರ ಅನುದಾನ ನೀಡಿದ್ದರೂ ಅಧಿಕಾರಿಶಾಹಿ ವ್ಯವಸ್ಥೆ, ಬಸವತತ್ವ ವಿರೋಧಿಗಳ ಕುತಂತ್ರಕ್ಕೆ ಕಾಮಗಾರಿ ಮುಗಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಾವೆಲ್ಲರೂ ಸರ್ಕಾರದ ಗಮನಕ್ಕೆ ತಂದು ಬೇಗನೆ ಕಾಮಗಾರಿ ಮುಗಿಸುವಂತೆ ಮಾಡಬೇಕು. ಈ ಕೇಂದ್ರ ನಿರ್ಮಾಣದಿಂದ ಶರಣರ ತತ್ವಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತವೆ ಎಂದರು.

‘ಶರಣರ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶರಣ ಮೇಳ ಮಾದರಿಯಾಗಿದೆ. ಬಹುದೇವತಾರಾಧನೆಯನ್ನು ಅಲ್ಲಗಳೆದು ಏಕದೇವೋಪಾಸನೆ ಜಾರಿಗೆ ತಂದು, ಜಾತಿ ಪದ್ಧತಿಯನ್ನು ಶರಣರು ನಿರ್ಮೂಲನೆ ಮಾಡಿದರು. ಇಂದು ನಾವು ಕುಟುಂಬ, ಜಾತಿ ಚಿಂತನೆ ಮಾಡುವ ಮೂಲಕ ಸಂಕುಚಿತರಾಗಿರುವುದು ದುರಂತ. ವಚನ ಸಾಹಿತ್ಯ ಅಧ್ಯಯನದ ಮೂಲಕ ವಿಶಾಲ ಮನೋಭಾವ ರೂಢಿಸಿಕೊಳ್ಳಬೇಕು’ ಎಂದರು.

ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ‘ಸನಾತನ ವೈದಿಕ ಮನಸ್ಸುಗಳು ಹಾಕುವ ಪ್ರಶ್ನೆಗಳಿಗೆ ಅಂದೆಯೇ ಬಸವಣ್ಣ ಉತ್ತರ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವುದು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಗಳನ್ನು ಅನುಷ್ಠಾನಗೊಳಿಸುವ ಜಾಗೃತ ಶರಣರ ಮೇಳವೇ ಹೊರತು ಕುಂಭ ಮೇಳ ಅಲ್ಲ’ ಎಂದು ಹೇಳಿದರು.

‘ಬಸವ ಧರ್ಮ ಪೀಠ ಅಂದಿನಿಂದ ಇಂದಿನವರೆಗೂ ತತ್ವ ಸಿದ್ದಾಂತದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಶರಣರ ತತ್ವಗಳನ್ನು ನಾಡಿಗೆ ಪರಿಚಯಿಸುತ್ತಿದೆ. ಆಧ್ಯಾತ್ಮಿಕ ಕೊರತೆಯಿಂದ ಸಮಾಜದಲ್ಲಿ ಹಲವು ಅನಾಹುತಗಳು ಆಗುತ್ತಿವೆ. ಅವುಗಳನ್ನು ತಡೆಯಲು ವಚನ ಸಾಹಿತ್ಯ ಅಧ್ಯಯನ ಅಗತ್ಯ. ಮುಗ್ಧ ಜನ ದ್ರೋಹ, ಮೋಸ ಮಾಡಲ್ಲ. ಕಲಿತವರಿಂದಲೇ ಮೋಸ ಅಧಿಕವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ‘ಸನಾತನವಾದಿಗಳ ಒತ್ತಡದಿಂದ ಕೂಡಲಸಂಗಮ ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ಮುಗಿಯದಿರುವುದು ದುರಂತ. 25 ವರ್ಷಗಳಿಂದ ನಡೆದಿರುವ ಕಾಮಗಾರಿ ಮುಕ್ತಾಯಗೊಳ್ಳುವುದು ಯಾವಾಗ? ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.

ಬೆಂಗಳೂರು ಸ್ಕೌಟ್ಸ್ ಮತ್ತು ಗೈಡ್ಸ್‌ ಕೇಂದ್ರದ ಆಯುಕ್ತೆ ಮುಕ್ತಾ ಕಾಗಲೆ ಅವರನ್ನು ಸತ್ಕರಿಸಲಾಯಿತು. ಬೆಂಗಳೂರು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಯೋಗೇಶ್ ಅವರಿಗೆ ಕಾಯಕ ಕಲಿ ಪ್ರಶಸ್ತಿ ನೀಡಲಾಯಿತು. ಪತ್ರಕರ್ತ ರಹಮತ್ ಕಂಚಗಾರ, ಮುಖಂಡ ರಾಜಗೌಡ ಪಾಟೀಲ, ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ, ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ವಿಜಯಾಂಬಿಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.