ADVERTISEMENT

ಜಮಖಂಡಿ | ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅನುದಾನದ ಕೊರತೆ: ಅರ್ಧಕ್ಕೆ ನಿಂತ ಕಟ್ಟಡ

ಆರ್.ಎಸ್.ಹೊನಗೌಡ
Published 22 ಜನವರಿ 2026, 6:47 IST
Last Updated 22 ಜನವರಿ 2026, 6:47 IST
ಜಮಖಂಡಿ: ಇಲ್ಲಿನ ಕತಾಟೆ ಪ್ಲಾಟ್‌ನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ಆದರ್ಶ ಮಾದರಿ ಶಾಲೆ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿರುವದು.
ಜಮಖಂಡಿ: ಇಲ್ಲಿನ ಕತಾಟೆ ಪ್ಲಾಟ್‌ನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ಆದರ್ಶ ಮಾದರಿ ಶಾಲೆ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿರುವದು.   

ಜಮಖಂಡಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಒಳ್ಳೆಯ ಕಟ್ಟಡದ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತವೆ. ಆದರೆ ಇಲ್ಲಿನ ಆದರ್ಶ ಮಾದರಿ ಶಾಲೆಯ ಕಟ್ಟಡ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.

ಇಲ್ಲಿನ ಕತಾಟೆ ಪ್ಲಾಟ್‌ನಲ್ಲಿ 2022 ರಲ್ಲಿ 2.4 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ಆದರ್ಶ ಮಾದರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭವಾಗಿತ್ತು. ಆದರೆ ಇಲ್ಲಿಯವರೆಗೂ ಕಟ್ಟಡ ಕಾಮಗಾರಿ ಮಾತ್ರ ಮುಗಿದಿದ್ದು ಇನ್ನೂ ಶೌಚಗೃಹ, ತಡೆಗೋಡೆ, ಪಿಟಿಂಗ್, ಕಲರ್, ಕಿಟಕಿ, ಬಾಗಿಲು ಸೇರಿದಂತೆ ಇನ್ನೂ ಹಲವಾರು ಕೆಲಸಗಳು ಬಾಕಿ ಉಳಿದುಕೊಂಡಿವೆ.

ಎರಡು ಅಂತಸ್ತಿನ ಕಟ್ಟಡದಲ್ಲಿ ಏಳು ಕೊಠಡಿ, ಊಟದ ಭವನ, ಕಚೇರಿ, ಅಡುಗೆ ಕೋಣೆ ನಿರ್ಮಾಣವಾಗಿವೆ. ಬಾಕಿ ಉಳಿದ ಕಾಮಗಾರಿ ಮುಗಿಯಲು ಇನ್ನೂ 72 ಲಕ್ಷ ಅನುದಾನ ಕೊರತೆ ಇದ್ದು, ಈ ಬಗ್ಗೆ ನಿರ್ಮಿತ ಕೇಂದ್ರದಿಂದ ಅಲ್ಪಸಂಖ್ಯಾತ ಇಲಾಖೆಗೆ ಪ್ರಸ್ತಾವಣೆ ಹೋಗಿದ್ದು ಆದರೆ ಅಲ್ಪಸಂಖ್ಯಾತ ಇಲಾಖೆಯಿಂದ ಆ ಯೋಜನೆ ಮುಗಿದಿದೆ ಎನ್ನುತ್ತಿದ್ದಾರೆ, ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ನಿರ್ಮಿತ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ನಿರ್ಮಿತ ಕೇಂದ್ರದಿಂದ ಉಪಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡದೆ ಇರುವುದಕ್ಕೆ ಕೆಲಸ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಮೌನ ಕೊಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣವಾಗುತ್ತಿರುವ ಅದರ್ಶ ಮಾದರಿ ಶಾಲೆಯ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆದರ್ಶ ಮಾದರಿ ಶಾಲೆಯ ಅಶಿಸ್ತಿನ ಕಾಮಗಾರಿಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಬಳಲಿ ಹೋಗಿದ್ದಾರೆ. ಹೊಸ ಶಾಲೆಗೆ ಹೋಗುತ್ತೇವೆ ಎಂದು ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮುಗಿಸಿಕೊಂಡು ಹೋಗುತ್ತಿದ್ದಾರೆ.

ಇಕ್ಕಟ್ಟಿನಲ್ಲಿ ಶಾಲಾ ಮಕ್ಕಳು: ಈಗಾಗಲೇ 9 ವರ್ಷದಿಂದ ಶಾಲಾ ತರಗತಿಗಳನ್ನು ಅಲ್ಪಸಂಖ್ಯಾತರ ಇಲಾಖೆಯ ಇಕ್ಕಟ್ಟಾದ 5 ಕೊಠಡಿಗಳಲ್ಲಿ 6 ರಿಂದ 10ನೇ ತರಗತಿ ವರೆಗೆ ಒಟ್ಟು 300 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಇಲ್ಲಿನ ಇಕ್ಕಟ್ಟಾದ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತು ಓದಲು ಪರದಾಡುವಂತಾಗಿದೆ, ಶಾಲೆಯ ದಾಖಲಾತಿಗಳನ್ನು ಮಕ್ಕಳ ಮಾಹಿತಿಯನ್ನು ಇಟ್ಟುಕೊಳ್ಳಲು ಶಿಕ್ಷಕರು ಪರದಾಡುವಂತಾಗಿದೆ.

ಅನುದಾನದ ಕೊರತೆಯಿಂದ ಕಟ್ಟಡದ ಕಾಮಗಾರಿ ಪೂರ್ಣವಾಗಿಲ್ಲ, ಈ ಬಗ್ಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಅನುದಾನ ಬಂದ ನಂತರ ಕಾಮಗಾರಿ ಮುಗಿಸಲಾಗುವುದು

ಶಂಕರಲಿಂಗ ಗೂಗಿ ನಿರ್ಮಿತ ಕೇಂದ್ರದ ಅಧಿಕಾರಿ ಬಾಗಲಕೋಟೆ

ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ ಮುಗಿಸಲು ಅನುದಾನ ಬಿಡುಗಡೆ ಮಾಡುವಂತೆ ಅಲ್ಪಸಂಖ್ಯಾತ ಸಚಿವ ಜಮೀರ ಅಹ್ಮದಖಾನ್‌ ಅವರಿಗೆ ಪತ್ರ ಬರೆದಿದ್ದೆವೆ. ಕೂಡಲೇ ಅನುದಾನ ನೀಡಲಾಗುವದು.
ಜಗದೀಶ ಗುಡಗುಂಟಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.