ADVERTISEMENT

ಶಸ್ತ್ರಚಿಕಿತ್ಸೆ ಕಲಿಕೆ: ನಿರ್ಜೀವ ಮಿದುಳಿಗೆ ಕೃತಕ ಜೀವ!

ಬಾಗಲಕೋಟೆಯ ಎಸ್‌.ಎನ್.ಮೆಡಿಕಲ್ ಕಾಲೇಜಿನ ತಜ್ಞರಿಂದ ಯಶಸ್ವಿ ಪ್ರಯೋಗ lದೇಶದಲ್ಲಿಯೇ ಮೊದಲ ಬಾರಿಗೆ ಈ ವಿಧಾನ ಬಳಕೆ

ವೆಂಕಟೇಶ ಜಿ.ಎಚ್.
Published 25 ಫೆಬ್ರುವರಿ 2021, 22:56 IST
Last Updated 25 ಫೆಬ್ರುವರಿ 2021, 22:56 IST
ಬಾಗಲಕೋಟೆಯ ಎಸ್.ಎನ್.ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ತಜ್ಞರಿಂದ ಮಿದುಳಿನ ಶಸ್ತ್ರಚಿಕಿತ್ಸೆಯ ಪ್ರಾಯೋಗಿಕ ಪಾಠದ ನೋಟ
ಬಾಗಲಕೋಟೆಯ ಎಸ್.ಎನ್.ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ತಜ್ಞರಿಂದ ಮಿದುಳಿನ ಶಸ್ತ್ರಚಿಕಿತ್ಸೆಯ ಪ್ರಾಯೋಗಿಕ ಪಾಠದ ನೋಟ   

ಬಾಗಲಕೋಟೆ: ಸತ್ತ ವ್ಯಕ್ತಿಯ ಮಿದುಳನ್ನು ಕೃತಕವಾಗಿ ಸಕ್ರಿಯಗೊಳಿಸಿ ಪ್ರಾಯೋಗಿಕ ಕಲಿಕೆಗೆ ಬಳಸುವ ಪ್ರಯೋಗ ಇಲ್ಲಿನ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಅಂಗರಚನಾ ಶಾಸ್ತ್ರ ವಿಭಾಗದಲ್ಲಿ ಯಶಸ್ವಿಯಾಗಿ ನಡೆದಿದೆ.

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಕಲಿಕೆಗೆ ಮೃತದೇಹಗಳನ್ನು ಬಳಸಲಾಗುತ್ತದೆ. ಆದರೆ ಈ ಪ್ರಯೋಗದಲ್ಲಿ ಸತ್ತ ಮಿದುಳನ್ನು ಕೃತಕವಾಗಿ ಸಕ್ರಿಯಗೊಳಿಸಲಾಗಿದೆ.

ಮಿದುಳು ಮತ್ತು ನರಗಳ ಶಸ್ತ್ರಚಿಕಿತ್ಸೆಯ ಅಧ್ಯಯನದ ಭಾಗವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಈ ವಿಧಾನ ಬಳಕೆಯಾಗಿದೆ.ಈ ಹಿಂದೆ 2017ರಲ್ಲಿ ಮೊದಲ ಬಾರಿಗೆ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ನರರೋಗ ಶಸ್ತ್ರಚಿಕಿತ್ಸಕರು ಈ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ್ದರು ಎಂದು ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ಕೊಳಗಿ ಹೇಳುತ್ತಾರೆ.

ADVERTISEMENT

ಮನುಷ್ಯನ ಮಿದುಳಿನ ಒಳ ಮತ್ತು ಹೊರಭಾಗದಲ್ಲಿ (ಮಿದುಳು ಹಾಗೂ ಬುರುಡೆಯ ನಡುವೆ) ಸಿ.ಎಸ್‌.ಎಫ್ (cerebro spinal fluid)‌ ಎನ್ನುವ ದ್ರವ ಸದಾ ಚಲಿಸುತ್ತಿರುತ್ತದೆ. ಈ ದ್ರವ ಮಿದುಳನ್ನು ಸಂರಕ್ಷಿಸುತ್ತದೆ. ಮೃತದೇಹದ ಮಿದುಳಿನಲ್ಲಿ ಸಿ.ಎನ್‌.ಎಫ್ ಸಂಚಾರ ಸ್ಥಗಿತಗೊಂಡಿರುತ್ತದೆ.

ಡಾ.ಸಂಜೀವ ಕೊಳಗಿ ಹಾಗೂ ಬೆಂಗಳೂರಿನ ಅಪೋಲೊ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಾ ತಜ್ಞರೂ ಆದ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕ ಡಾ.ಅಜಯ್ ಹೆರೂರ ಅವರ ತಂಡ, ಮೃತದೇಹದ ಮಿದುಳಿನಲ್ಲಿ ಕೃತಕವಾಗಿ ದ್ರವ ಸಂಚರಿಸುವಂತೆ ಮಾಡಿ, ನಂತರ ಅದನ್ನು ಶಸ್ತ್ರಚಿಕಿತ್ಸೆ ಕುರಿತ ಕಲಿಕೆಗೆ ಬಳಸಿಕೊಂಡಿದೆ.

‘ಸಿ.ಎಸ್‌.ಎಫ್‌ ಸಂಚಾರ ಇಲ್ಲದ ಮಿದುಳನ್ನು ಶಸ್ತ್ರಚಿಕಿತ್ಸೆಯ ತರಬೇತಿಗೆ ಬಳಸಿದರೆ ಸಹಜ ಮತ್ತು ಸಜೀವ ಅನುಭವ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಹೀಗಾಗಿ ಕೃತಕವಾಗಿ, ಈ ದ್ರವವನ್ನು ಮಿದುಳಿನಲ್ಲಿ ಸಕ್ರಿಯಗೊಳಿಸುವ ಪ್ರಯೋಗಕ್ಕೆ ಮುಂದಾದೆವು’ ಎಂದು ಡಾ.ಸಂಜೀವ್ ಕೊಳಗಿ ’ಪ್ರಜಾವಾಣಿ‘ಗೆ ತಿಳಿಸಿದರು.

‘ಸಿ.ಎಸ್‌‌.ಎಫ್ ಮಾದರಿಯ ದ್ರಾವಣವನ್ನು‌ (ಸಲೈನ್)‌ ನೀಡಿ ಅದು ಸಂಚರಿಸುವಂತೆ ಮಾಡಲಾಯಿತು. ಈ ಪ್ರಯೋಗವನ್ನು ಫೆ 13ರಂದು ಅಮೆರಿಕದ ಎನ್‌ಎಎಸ್‌ಎಸ್‌ ಸಂಸ್ಥೆ (North American Skullbase Society) ಆಯೋಜಿಸಿದ್ದ ವರ್ಚ್ಯುವಲ್‌ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಲಾಯಿತು.ದೇಶ–ವಿದೇಶದ 30 ಮಂದಿ ಕಲಿಕಾರ್ಥಿಗಳು ಪಾಲ್ಗೊಂಡು ಅದನ್ನು ನೇರವಾಗಿ ವೀಕ್ಷಿಸಿದರು’ ಎಂದು ಡಾ.ಸಂಜೀವ್ ತಿಳಿಸಿದರು.

ಅತ್ಯುತ್ತಮ ಶಸ್ತ್ರಚಿಕಿತ್ಸಕರಾಗಿ ರೂಪಿಸಲು ನೆರವು

‌‘ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಅತ್ಯುತ್ತಮ ನರಶಸ್ತ್ರಚಿಕಿತ್ಸಕರನ್ನಾಗಿ ರೂಪಿಸಲು ಈ ವಿಧಾನ ನೆರವಾಗಲಿದೆ. ಮಿದುಳಿನ ಶಸ್ತ್ರಚಿಕಿತ್ಸೆಯ ಪ್ರಾಯೋಗಿಕ ಕಲಿಕೆಗೆ ಜೀವಂತ ರೋಗಿಗಳನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಲಿಕಾರ್ಥಿಗಳಿಗೆ ನೈಜ ಅನುಭವ ಸಿಗಲಿ ಎಂಬ ಕಾರಣಕ್ಕೆ ‍ಪ್ರಯೋಗಕ್ಕೆ ಮುಂದಾದೆವು‘ ಎಂದುಎನ್.ಎನ್.ಮೆಡಿಕಲ್ ಕಾಲೇಜುಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥಡಾ.ಸಂಜೀವ್ ಕೊಳಗಿ ಹೇಳುತ್ತಾರೆ.

ಮಿದುಳಿನ ಎಂಡೊಸ್ಕೋಪಿಕ್ (ಕೀ ಹೋಲ್) ಸರ್ಜರಿಯಂತಹ ಕ್ಲಿಷ್ಟಕರ ಚಿಕಿತ್ಸೆ ಕಲಿಯಲು ವೈದ್ಯ ವಿದ್ಯಾರ್ಥಿಗಳಿಗೆ ಈ ರೀತಿಯ ತರಬೇತಿ ಅನುಕೂಲವಾಗಲಿದೆ. ಈ ಪ್ರಯೋಗವನ್ನುಎನ್‌ಎಎಸ್‌ಎಸ್‌ ಸಂಸ್ಥೆಯ ಜರ್ನಲ್‌ನಲ್ಲಿ ಪ್ರಕಟಿಸಲು
ಸಿದ್ಧತೆ ನಡೆಸಿದ್ದೇವೆಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.