ADVERTISEMENT

ಬಾಗಲಕೋಟೆ: ಬಿರು ಬಿಸಿಲಿನಲ್ಲಿ ಬೆವರಿಳಿಸುತ್ತಿರುವ ಅಭ್ಯರ್ಥಿಗಳು

ಟೊಪ್ಪಿಗೆ ಧರಿಸಿ, ಮಜ್ಜಿಗೆ, ಲಸ್ಸಿ, ತಂಪು ಪಾನೀಯಗಳ ಮೊರೆ

ಬಸವರಾಜ ಹವಾಲ್ದಾರ
Published 26 ಏಪ್ರಿಲ್ 2024, 8:14 IST
Last Updated 26 ಏಪ್ರಿಲ್ 2024, 8:14 IST
ಬಿಸಿಲಿನಲ್ಲಿ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಬೆಂಬಲಿಗರು ಟೊಪ್ಪಿಗೆ ಹಾಕಿಕೊಂಡಿದ್ದಾರೆ
ಬಿಸಿಲಿನಲ್ಲಿ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಬೆಂಬಲಿಗರು ಟೊಪ್ಪಿಗೆ ಹಾಕಿಕೊಂಡಿದ್ದಾರೆ   

ಬಾಗಲಕೋಟೆ: ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲು ಹೆಚ್ಚಿದೆ. ಮನೆಯಲ್ಲಿ ಕುಳಿತರೂ ಸಮಾಧಾನವಿಲ್ಲದಂತಹ ಸ್ಥಿತಿ ಇದೆ. ಆದರೆ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರು, ಬೆಂಬಲಿಗರು ಬಿರು ಬಿಸಿಲಿನಲ್ಲಿ ಬೆವರಿಳಿಸುತ್ತಾ ಪ್ರಚಾರ ನಡೆಸಿದ್ದಾರೆ.

ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೇ ಪ್ರಚಾರ ಮಾಡುತ್ತಿದ್ದಾರೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿಯೂ ಟೊಪ್ಪಿಗೆ ಧರಿಸಿ, ಮಜ್ಜಿಗೆ, ಲಸ್ಸಿ ಸೇರಿದಂತೆ ತಂಪು ಪಾನೀಯಗಳನ್ನು ಸೇವಿಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಕೆಲವೇ ದಿನಗಳು ಉಳಿದಿರುವುದರಿಂದ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ, ಸಂಜೆ 4ರಿಂದ ರಾತ್ರಿ 9ರವರೆಗೂ ಪ್ರಚಾರ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಕಾರ್ಯಕ್ರಮಗಳು ನಿಗದಿತ ವೇಳಾಪಟ್ಟಿಯಂತೆ ನಡೆಯದ್ದರಿಂದ ಮಧ್ಯಾಹ್ನದ ವೇಳೆಯೂ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

ADVERTISEMENT

ಎಂಟು ವಿಧಾನಸಭಾ ಕ್ಷೇತ್ರಗಳ ಪ್ರಮುಖ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಾದರೂ ಪ್ರಚಾರ ನಡೆಸಬೇಕಾಗಿದೆ. ಬಿಡುವಿಲ್ಲದೆ ಪ್ರಚಾರದಲ್ಲಿ ಪಾಲ್ಗೊಂಡರೂ, ಎಲ್ಲ ಕಡೆಗಳಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು, ಮಾಜಿ ಶಾಸಕರ ನೇತೃತ್ವದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಟೊಪ್ಪಿಗೆ, ಮಜ್ಜಿಗೆ ಮೊರೆ: ಬಹುತೇಕ ನಾಯಕರು, ಬೆಂಬಲಿಗರು ಕಾಟನ್‌ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಹಲವರು ಟೊಪ್ಪಿಗಳ ಮೊರೆ ಹೋಗಿದ್ದಾರೆ. ಕೆಲವರು ವಾಹನಗಳಲ್ಲಿ ನೀರಿನ ಟ್ಯಾಂಕ್‌, ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಜತೆಗೆ ಮಜ್ಜಿಗೆ, ಪಾನಕ, ಎಳನೀರು ಸೇವನೆ ಮಾಡುವ ಮೂಲಕ ದಾಹ ತೀರಿಸುವ ಯತ್ನ ಮಾಡುತ್ತಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವ ಸಿಬ್ಬಂದಿಯೂ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದಾರೆ. ಮೂರು ಶಿಫ್ಟ್‌ಗಳನ್ನು ಮಾಡಿದರೂ, ಎರಡು ಶಿಫ್ಟ್‌ನವರು ಬಿಸಿನಲ್ಲಿ ಕೆಲಸ ಮಾಡಬೇಕಾಗಿದೆ. ರಸ್ತೆ ಬದಿಯಲ್ಲಿಯೇ ನಿಂತು ವಾಹನಗಳನ್ನು ತಪಾಸಣೆ ಕಾರ್ಯ ಮಾಡಬೇಕಾಗಿದೆ.

ಜನ ಸೇರಿಸುವ ಸವಾಲು: ಬಿಸಿಲು ಹೆಚ್ಚಿನ ಪ್ರಮಾಣದಲ್ಲಿರುವುದಿಂದ ಮಧ್ಯಾಹ್ನದ ವೇಳೆಗೆ ಹಳ್ಳಿಗಳಲ್ಲಿ ನಡೆಯುವ ಪ್ರಚಾರ ಸಭೆಗಳಲ್ಲಿ ಜನರನ್ನು ಸೇರಿಸುವುದೇ ಸ್ಥಳೀಯ ಮುಖಂಡರಿಗೆ ಸವಾಲಾಗಿದೆ. ಮಧ್ಯಾಹ್ನದ ವೇಳೆ ಸಭೆ ಸೇರುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ರಾಜಕೀಯ ಸಭೆಗಳನ್ನು ಮಾಡಬಾರದು ಎಂದಿರುವುದರಿಂದ ವೇದಿಕೆ ನಿರ್ಮಿಸಿಯೇ ಮಾಡಬೇಕಾಗಿದೆ. ಆದರೆ, ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಮೊತ್ತ ನಿಗದಿ ಪಡಿಸಿರುವುದರಿಂದ ವೇದಿಕೆಯೂ ನಿರ್ಮಿಸಲು ಸಾಧ್ಯವಾಗುತ್ತಿಲ್ಲ.

ಗ್ರಾಮಗಳ ಅರಳಿ ಕಟ್ಟೆ, ನಾಯಕರ ದೊಡ್ಡಮನೆಗಳ ಮುಂದಿನ ಆವರಣದಲ್ಲಿ ಸಭೆ ಮಾಡಲಾಗುತ್ತಿದೆ. ಕೆಲವೆಡೆ ಬಿಸಿನಲ್ಲಿಯೇ ಪ್ರಚಾರ ಸಭೆ ಮಾಡಬೇಕಾಗಿದೆ. ಹವಾ ನಿಯಂತ್ರಿತ ಕೊಠಡಿಗಳಲ್ಲಿರುತ್ತಿದ್ದ ನಾಯಕರೂ ಬೆವರಿಳಿಸುತ್ತಾ ಮತಯಾಚನೆ ಮಾಡುತ್ತಿದ್ದಾರೆ.

ಬಿಸಿಲಿನಲ್ಲಿಯೇ ಮೆರವಣಿಗೆ, ರ‍್ಯಾಲಿ ಬೆಳಿಗ್ಗೆ, ಸಂಜೆ ಪ್ರಚಾರಕ್ಕೆ ಒತ್ತು 41 ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.