ADVERTISEMENT

ಮಹಾಲಿಂಗಪುರ ಪುರಸಭೆ: ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಫಲಿತಾಂಶ ನಿರೀಕ್ಷೆ

25 ಸದಸ್ಯ ಬಲದ ಪುರಸಭೆ

ಪ್ರಜಾವಾಣಿ ವಿಶೇಷ
Published 23 ಆಗಸ್ಟ್ 2024, 4:22 IST
Last Updated 23 ಆಗಸ್ಟ್ 2024, 4:22 IST
ಮಹಾಲಿಂಗಪುರ ಪುರಸಭೆ ಕಾರ್ಯಾಲಯ
ಮಹಾಲಿಂಗಪುರ ಪುರಸಭೆ ಕಾರ್ಯಾಲಯ   

ಮಹಾಲಿಂಗಪುರ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಮೀಸಲಾತಿ ಪ್ರಕಟವಾಗಿ ಆ.23ರಂದು ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಫಲಿತಾಂಶ ಬರುವ ಸಾಧ್ಯತೆಗಳು ದಟ್ಟವಾಗಿವೆ.

ಸಂಸದ, ಶಾಸಕ ಸೇರಿ 25 ಸದಸ್ಯ ಬಲದ ಪುರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಮ್ಯಾಜಿಕ್ ಸಂಖ್ಯೆಗೆ 13 ತಲುಪಬೇಕು, ಇದಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡಕ್ಕೂ ಅವಕಾಶ ಇದೆ. ಪಕ್ಷೇತರ ಅಭ್ಯರ್ಥಿ ನಿರ್ಣಾಯಕರಾಗಿದ್ದಾರೆ. 

ಕಾಂಗ್ರೆಸ್‍ಗೆ ಜಿಗಿದ ಪಕ್ಷೇತರ: ಪುರಸಭೆಯ 23 ಸದಸ್ಯರಲ್ಲಿ 13 ಸದಸ್ಯರನ್ನು ಹೊಂದಿದ್ದ ಬಿಜೆಪಿಯಲ್ಲಿ ಮೂವರ ಸದಸ್ಯರ ಬಂಡಾಯದಿಂದಾಗಿ 10ಕ್ಕೆ ಇಳಿದಿದೆ. ಅದೇ ರೀತಿ 9 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್, ಮೂವರು ಬಿಜೆಪಿ ಬಂಡಾಯ ಸದಸ್ಯರನ್ನು ಒಲಿಸಿಕೊಂಡು 12ಕ್ಕೆ ಏರಿಸಿಕೊಂಡಿದೆ. ಕಳೆದ ಅವಧಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಈ ಬಾರಿ ಕಾಂಗ್ರೆಸ್‍ನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅಚ್ಚರಿ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ. 

ADVERTISEMENT

ಕಳೆಗುಂದಿದ ಬಿಜೆಪಿ: ಬಾಕಿ ಉಳಿದ 15 ತಿಂಗಳ ಅವಧಿಗೆ ‘ಸಾಮಾನ್ಯ’ ಅಧ್ಯಕ್ಷ ಸ್ಥಾನ ಹಾಗೂ ‘ಸಾಮಾನ್ಯ ಮಹಿಳೆ’ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಲಾಗಿದೆ. ಕಳೆದ ಅವಧಿಗೆ ಪಕ್ಷದಿಂದ ಇಬ್ಬರು ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಯಲ್ಲಿ ಯಾವುದೇ ಹೆಸರು ಕೇಳಿಬರುತ್ತಿಲ್ಲ. ಚಟುವಟಿಕೆಗಳೂ ಕಂಡುಬರುತ್ತಿಲ್ಲ.

ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಉತ್ಸಾಹದಲ್ಲಿದೆ. ಈಗಾಗಲೇ ಪಕ್ಷದ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದೆ. ನೇರವಾಗಿ ಮತದಾನಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂಚೂಣಿ ಹೆಸರು: ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಬಾರಿ ಸದಸ್ಯರಾಗಿರುವ ಯಲ್ಲನಗೌಡ ಪಾಟೀಲ ಹೆಸರು ಮುಂಚೂಣಿಯಲ್ಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಭಾವನಾ ಪಾಟೀಲ, ಶೀಲಾ ಭಾವಿಕಟ್ಟಿ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು, ಕಾಂಗ್ರೆಸ್ ಬೆಂಬಲ ಪಡೆದೂ ಅಧ್ಯಕ್ಷ ಸ್ಥಾನ ತಪ್ಪಿಸಿಕೊಂಡಿದ್ದ ಸವಿತಾ ಹುರಕಡ್ಲಿಯೂ ಕಣಕ್ಕಳಿಯುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.