ADVERTISEMENT

ತಾಲ್ಲೂಕು ಕೇಂದ್ರಕ್ಕೆ ಆಗ್ರಹ: ಮಹಾಲಿಂಗಪುರ ಬಂದ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:25 IST
Last Updated 20 ಜನವರಿ 2026, 6:25 IST
ಮಹಾಲಿಂಗಪುರ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು 
ಮಹಾಲಿಂಗಪುರ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು    

ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಸೋಮವಾರ ‘ಮಹಾಲಿಂಗಪುರ ಬಂದ್’ ಹಮ್ಮಿಕೊಳ್ಳಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.  ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ್, ಗಾಂಧಿ ವೃತ್ತದ ಮಾರ್ಗವಾಗಿ ಮೆರವಣಿಗೆ ಚನ್ನಮ್ಮ ವೃತ್ತ ತಲುಪಿ ಸಭೆಯಾಗಿ ಮಾರ್ಪಟ್ಟಿತು. ಅಲ್ಲಿ ಹೋರಾಟದ ವೇದಿಕೆ ನಿರ್ಮಿಸಲಾಯಿತು. ನಂತರ ಒಲೆ ಹೂಡಿದ ಹೋರಾಟಗಾರರು ಅಡುಗೆ ತಯಾರಿಸಿ ರಸ್ತೆಯಲ್ಲೇ ಊಟ ಮಾಡಿದರು.

‘ಮಹಾಲಿಂಗಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. 1381 ದಿನದಿಂದ ಅನಿರ್ದಿಷ್ಟ ಮುಷ್ಕರ ನಡೆದಿದೆ. ಹಂತಹಂತವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಶಾಂತಿಯುತ ಹೋರಾಟ ಉಗ್ರ ರೂಪ ತಾಳುವುದಕ್ಕೂ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಹೋರಾಟಗಾರರು ಎಚ್ಚರಿಸಿದರು.

ADVERTISEMENT

‘ಮಹಾಲಿಂಗಪುರ ಪಟ್ಟಣವು 16 ಗ್ರಾಮವನ್ನೊಳಗೊಂಡಂತೆ ತಾಲ್ಲೂಕು ಕೇಂದ್ರವಾಗಲು ಸೂಕ್ತ ಎಂದು ಜಿಲ್ಲಾಧಿಕಾರಿ ಸಲ್ಲಿಸಿದ ವರದಿಯನ್ನು ಪರಿಗಣನೆ ಮಾಡಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು’ ಎಂದು ಹೋರಾಟಗಾರರು ಆಗ್ರಹಿಸಿದರು.

‘ಮುಖ್ಯಮಂತ್ರಿ ಭೇಟಿಗೆ ನಿಯೋಗಕ್ಕೆ ಅವಕಾಶ ಕಲ್ಪಿಸಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ’ ಎಂದರು. ತಹಶೀಲ್ದಾರ್ ಗಿರೀಶ ಸ್ವಾದಿ, ಹೋರಾಟಗಾರರ ಅಹವಾಲು ಆಲಿಸಿ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ಶಾಸಕ ಸಿದ್ದು ಸವದಿ ಹೋರಾಟ ವೇದಿಕೆಗೆ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿ, ‘ಅಧಿವೇಶನದಲ್ಲಿ ಈ ಕುರಿತು ಮಾತನಾಡುತ್ತೇನೆ’ ಎಂದರು.

ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಬಸ್ ಸಂಚಾರವನ್ನು ನಿಷೇಧಿಸಲಾಗಿತ್ತು. ಕಬ್ಬಿನ ಟ್ರ್ಯಾಕ್ಟರ್, ಟ್ರಕ್ ಸೇರಿದಂತೆ ವಿವಿಧ ವಾಹನಗಳು ಕಿ.ಮೀ. ಗಟ್ಟಲೆ ನಿಂತು ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತು. ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಗತ್ಯ ಸೇವೆ ಹೊರತುಪಡಿಸಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಸಾರ್ವಜನಿಕರು ಬೆಂಬಲ ಸೂಚಿಸಿದರು.

ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಸೇರಿದಂತೆ ಪಟ್ಟಣದ ವಿವಿಧ ಸಂಘ ಸಂಸ್ಥೆ ಸದಸ್ಯರು, ಸಮಾಜದ ಮುಖಂಡರು ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಹೋರಾಟದಲ್ಲಿ ಭಾಗವಹಿಸಿದ್ದರು. ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆಗೆ ಸರ್ಕಾರದಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆ ‘ಮಹಾಲಿಂಗಪುರ ಬಂದ್’ ಹೋರಾಟವನ್ನು ಮುಂದುವರೆಸುವುದಾಗಿ ತಾಲ್ಲೂಕು ಹೋರಾಟ ಸಮಿತಿ ಮುಖಂಡರು ತಿಳಿಸಿದರು.

ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು
ಮಹಾಲಿಂಗಪುರದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡ ಮಹಾಲಿಂಗಪುರ ಬಂದ್ ಅಂಗವಾಗಿ ರಸ್ತೆಯಲ್ಲೇ ಊಟ ಮಾಡಿದ ಹೋರಾಟಗಾರರು
ಮಹಾಲಿಂಗಪುರದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡ ಮಹಾಲಿಂಗಪುರ ಬಂದ್ ಹೋರಾಟದ ವೇದಿಕೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.