ADVERTISEMENT

ರಬಕವಿ ಬನಹಟ್ಟಿ | ವರ್ಷಕ್ಕೂ ಹೆಚ್ಚು ಕಾಲದಿಂದ ಖಾಲಿ: ಸದ್ಬಳಕೆಯಾಗದ ನಗರಸಭೆಯ ಜಾಗ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 6:36 IST
Last Updated 15 ಜುಲೈ 2024, 6:36 IST
ಬನಹಟ್ಟಿಯಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡು ಖಾಲಿ ಬಿದ್ದಿರುವ ನಗರಸಭೆಯ ಜಾಗ
ಬನಹಟ್ಟಿಯಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡು ಖಾಲಿ ಬಿದ್ದಿರುವ ನಗರಸಭೆಯ ಜಾಗ   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಗೆ ಸಾಕಷ್ಟು ಆದಾಯ ತಂದು ಕೊಡುವ ಪ್ರದೇಶ ವರ್ಷದಿಂದ ಖಾಲಿ ಇದೆ. ಸದ್ಯ ಈ ಪ್ರದೇಶ ಖಾಸಗಿ ವಾಹನಗಳ ನಿಲುಗಡೆ, ಸುತ್ತ ಮುತ್ತಲಿನ ಮನೆಯವರು ತ್ಯಾಜ್ಯ ಹಾಕುವ, ಹಂದಿ ನಾಯಿಗಳು ವಾಸಿಸುವ ಪ್ರದೇಶವಾಗಿದೆ.

ಈ ಜಾಗದಲ್ಲಿದ್ದ ಮಲ್ಲಿಕಾರ್ಜುನ ಚಲನಚಿತ್ರ ಮಂದಿರವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿರುವುದರಿಂದ ಇಲ್ಲಿನ ಪ್ರದೇಶ ಖಾಲಿಯಾಗಿದೆ. ಅಂದಾಜು 60 ಕ್ಕೂ ಹೆಚ್ಚು ವರ್ಷಗಳ ಕಾಲ ಮಲ್ಲಿಕಾರ್ಜುನ ಚಲನಚಿತ್ರ ಮಂದಿರ ಈ ಭಾಗದ ಜನರಿಗೆ ಮನರಂಜನೆಯ ಸ್ಥಳವಾಗಿತ್ತು.

ಈಗ ನಿತ್ಯ ನಡೆಯುವ ಸಂತೆ ಸ್ಥಳ ಅತ್ಯಂತ ಇಕ್ಕಟ್ಟಾಗಿದೆ. ಬಹುತೇಕ ಹೂ, ತರಕಾರಿ, ಮೊಸರು ವ್ಯಾಪಾರಸ್ಥರು ರಸ್ತೆ ಬದಿಗೆ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ. ದಿನನಿತ್ಯ ಚಿಕ್ಕ ಪುಟ್ಟ ಅಪಘಾತಗಳು ನಡೆಯುತ್ತಿವೆ. ಗಾಂಧಿ ವೃತ್ತದ ಬಳಿ ಸಂತೆಗೆ ಬರುವ ಜನರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದರೆ, ಆರ್ಧದಷ್ಟು ಸ‍್ಥಳವನ್ನು ಮಾರಾಟಗಾರರು ಆಕ್ರಮಿಸಿರುವುದರಿಂದ ಬೆಳಗಿನ 7 ರಿಂದ 10ರವರಿಗೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ADVERTISEMENT

ಖಾಲಿ ಇರುವ ಪ್ರದೇಶ ಕೂಡ ನಿತ್ಯ ನಡೆಯುವ ಸಂತೆಯ ಸ್ಥಳಕ್ಕೆ ಹೊಂದಿಕೊಂಡೇ ಇದೆ. ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಸಂತೆಯನ್ನು ವಿಸ್ತರಿಸಿದರೆ ಗ್ರಾಮೀಣ ಪ್ರದೇಶದಿಂದ ಬರುವ ರೈತರಿಗೆ, ವ್ಯಾಪಾರಸ್ಥರಿಗೆ, ತಳ್ಳುವ ಗಾಡಿಯ ಮೇಲೆ ಹಣ್ಣುಗಳನ್ನು ಇಟ್ಟುಕೊಂಡು ಮಾರಾಟ ಮಾಡುವವರಿಗೆ ಮತ್ತು ಖರೀದಿದಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳು ಗಮನ ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

‘ಈಗ ನಡೆಯುತ್ತಿರುವ ಸಂತೆ ಪ್ರದೇಶ ಮತ್ತು ಖಾಲಿ ಇರುವ ಪ್ರದೇಶದಲ್ಲಿ ನಗರಸಭೆಯಿಂದ ಒಂದು ಬೃಹತ್‍ ಕಟ್ಟಡ ನಿರ್ಮಾಣ ಮಾಡಿದರೆ ಸಂತೆಗೂ ಹಾಗೂ ರಬಕವಿ ಬನಹಟ್ಟಿ ತಾಲ್ಲೂಕಿನ ವಿವಿಧ ಸರ್ಕಾರಿ ಕಾರ್ಯಾಲಯಗಳಿಗೆ ಬಾಡಿಗೆ ನೀಡಲು ಸಾಧ್ಯವಾಗುತ್ತದೆ’ ಎಂದು ನಗರಸಭೆ ಸದಸ್ಯ ಪ್ರಭಾಕರ ಮೊಳೆದ ಅಭಿಪ್ರಾಯಪಟ್ಟರು.

‘ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ನಗರಸಭೆಯಲ್ಲಿ ಅನುದಾನದ ಕೊರತೆ ಇದೆ. ನಗರಸಭೆಗೆ ಸಾಕಷ್ಟು ಆದಾಯ ತಂದುಕೊಡಬೇಕಾಗಿದ್ದ ಸ್ಥಳ ಖಾಲಿ ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಅನುದಾನ ಪಡೆದುಕೊಂಡು ಈ ಪ್ರದೇಶವನ್ನು ಅಭಿವೃದ್ಧಿ ಪಡಿಸದಬೇಕಿದೆ. ತಾತ್ಕಾಲಿಕವಾಗಿ ಸಂತೆಯನ್ನು ಖಾಲಿ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ನಗರಸಭೆ ಮಾಜಿ ಅಧ್ಯಕ್ಷ ಶ್ರೀಶೈಲ ಬೀಳಗಿ ಒತ್ತಾಯಿಸಿದರು.

ಬನಹಟ್ಟಿಯಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ಧಾರಿಯ ಮೇಲೆಯೇ ನಡೆಯುತ್ತಿರುವ ಮಂಗಳವಾರ ಪೇಟೆಯ ಸಂತೆ
ಚುನಾವಣೆಯಿಂದಾಗಿ ಖಾಲಿ ಜಾಗವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಜಾಗದಿಂದ ನಗರಸಭೆಗೆ ನಿರಂತರ ಆದಾಯ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು
ಜಗದೀಶ ಈಟಿ ಪೌರಾಯುಕ್ತರು ರಬಕವಿ ಬನಹಟ್ಟಿ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.