ಮಹಾಲಿಂಗಪುರ: ಪಟ್ಟಣದಲ್ಲಿ ಕೃಷಿಗೆ ಅಗತ್ಯವಾದ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು, ಸಮರ್ಪಕವಾಗಿ ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗಿದ್ದು, ಇದರಿಂದ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಕಡಿಮೆ ದರ ಎನ್ನುವ ಕಾರಣಕ್ಕೆ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬಂದಿದೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು, ಅರಿಸಿನ, ಗೋವಿನ ಜೋಳ ಬೆಳೆಯಲಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ಯೂರಿಯಾ ನೀಡಿದರೆ ಈ ಬೆಳೆಗಳು ಚೇತರಿಸಿಕೊಂಡು ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂಬ ಉದ್ದೇಶದಿಂದ ಯೂರಿಯಾ ಖರೀದಿಸಲು ರೈತರು ಮುಂದಾಗಿದ್ದಾರೆ.
ಮಹಾಲಿಂಗಪುರ, ಬುದ್ನಿ ಪಿಡಿ, ಕೆಸರಗೊಪ್ಪ, ಬಿಸನಾಳ, ಸೈದಾಪುರ, ಮಾರಾಪುರ, ಮದಭಾವಿ, ಸಂಗಾನಟ್ಟಿ, ನಂದಗಾಂವ, ಢವಳೇಶ್ವರ ಗ್ರಾಮಗಳ ವ್ಯಾಪ್ತಿಯನ್ನು ಪಟ್ಟಣದ ಕೃಷಿ ಮಾರಾಟ ಕೇಂದ್ರ ಹೊಂದಿದೆ.
‘ಈ ಭಾಗದಲ್ಲಿ 2025-26ನೇ ಸಾಲಿನಲ್ಲಿ ಕಬ್ಬು ಐದೂವರೆ ಸಾವಿರ ಹೆಕ್ಟೇರ್, ಗೋವಿನ ಜೋಳ 500 ಹೆಕ್ಟೇರ್, ಅರಿಸಿನ ಸೇರಿದಂತೆ ಇತರೆ ಬೆಳೆಗಳು 1 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ’ ಎಂದು ಕೃಷಿ ಮಾರಾಟ ಕೇಂದ್ರದ ಅಧಿಕಾರಿ ಟಿ.ಎಂ.ಡಾಂಗೆ ತಿಳಿಸಿದರು.
ಡಿಎಪಿಗೆ ಬೇಡಿಕೆ: ಯೂರಿಯಾ ಜತೆಗೆ ಡಿಎಪಿ ಗೊಬ್ಬರಕ್ಕೂ ಬೇಡಿಕೆ ಹೆಚ್ಚಾಗಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗದೇ ಇರುವುದರಿಂದ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರಕ್ಕೆ ರೈತರು ಮೊರೆ ಹೋಗಿದ್ದಾರೆ. ಬೆಳೆಗಳಿಗೆ ಕಾಂಪ್ಲೆಕ್ಸ್ ಹಾಕಿದ ನಂತರ ಯೂರಿಯಾ ಹಾಕಬೇಕಿದ್ದು, ಇದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
50 ಕೇಜಿ ಡಿಎಪಿ ಗೊಬ್ಬರಕ್ಕೆ ₹1350 ಕಾಂಪ್ಲೆಕ್ಸ್ ಗೊಬ್ಬರಕ್ಕೆ ₹1300ದಿಂದ ₹1720ದರ ಇದೆ. ಯೂರಿಯಾಕ್ಕೆ ಸರ್ಕಾರದ ಸಬ್ಸಿಡಿ ಹೆಚ್ಚಿದ್ದು, 45 ಕೇಜಿ ಯೂರಿಯಾ ಗೊಬ್ಬರದ ಒಂದು ಚೀಲಕ್ಕೆ ₹280 ರಿಂದ ₹300ವರೆಗೆ ದರ ಇದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸೇರಿದಂತೆ 30ಕ್ಕೂ ಹೆಚ್ಚು ರಸಗೊಬ್ಬರ ಅಂಗಡಿಗಳಿದ್ದು, ಕೆಲ ಅಂಗಡಿಗಳಲ್ಲಿ ಮಾತ್ರ ಯೂರಿಯಾ ಸಿಗುತ್ತಿದೆ.
‘ಅಪಾಯಕಾರಿ ರಾಸಾಯನಿಕ ಗೊಬ್ಬರಗಳಾದ ಯೂರಿಯಾ ಮತ್ತು ಫಾಸ್ಪೇಟ್ ಬೇಸಾಯ ಭೂಮಿಗಳಷ್ಟೆ ಅಲ್ಲದೆ, ಅನೇಕ ಜೀವರಾಶಿಗಳಿಗೆ ಹಾನಿಯುಂಟು ಮಾಡುತ್ತವೆ. ಬೆಳೆಯುವ ಹಾಗೂ ನಾಟಿಯಾಗುವ ಹಂತದಲ್ಲಿ ಮಾತ್ರ ಯೂರಿಯಾ ಅಗತ್ಯವಿದೆ. ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಅಪಾಯ ಇದೆ’ ಎನ್ನುತ್ತಾರೆ ಮಹಾಲಿಂಗಪುರದ ಕೃಷಿತಜ್ಞ ಎಂ.ವೈ.ಕಟ್ಟಿ.
ಹೆಚ್ಚಿನ ಯೂರಿಯಾ ಗೊಬ್ಬರ ಬೇಡಿಕೆಗೆ ಕೃಷಿ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಮಹಾಲಿಂಗಪುರ ಭಾಗಕ್ಕೆ ಅಗತ್ಯಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ಪೂರೈಸಲಾಗುವುದು. ರೈತರು ಗೊಂದಲ ಆಗಬಾರದು.ಬಿ.ವಿ.ದೊಡಮನಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಮುಧೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.