ಬಾಗಲಕೋಟೆ: ಕರ್ತವ್ಯಲೋಪ ಮತ್ತು ದುರ್ನಡತೆ ಆರೋಪದ ಕುರಿತ ಇಲಾಖೆ ವಿಚಾರಣೆ ಬಾಕಿಯಿರಿಸಿ, ಮುಧೋಳ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶಿವಕುಮಾರ್ ಆದೇಶಿಸಿದ್ದಾರೆ.
‘ಅನಧಿಕೃತ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಮುಚ್ಚಳಿಕೆ ಪಡೆದು ಪ್ರಕರಣ ಮುಚ್ಚಿ ಹಾಕಿರುವುದು. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದಡಿ ನೋಂದಣಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸದಿರುವುದು ಕರ್ತವ್ಯಲೋಪ. ಪಿಸಿ ಆ್ಯಂಡ್ ಪಿಎನ್‌ಡಿಸಿ ಕಾಯ್ದೆಯಡಿ ಕಾರ್ಯನಿರ್ವಹಿಸಲು ಅಧಿಕಾರವಿಲ್ಲ ಎಂದು ಹೇಳಿ ಕರ್ತವ್ಯಲೋಪ ಮಾಡಿದ್ದಾರೆ’ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
‘ನಕಲಿ ವೈದ್ಯರ ವಿರುದ್ಧ ದೂರು ಬಂದಾಗ ದಾಳಿ ಮಾಡಿ ಕೆಲವು ಪ್ರಕರಣಗಳಲ್ಲಿ ಅವರಿಂದ ಮುಚ್ಚಳಿಕೆ ಪತ್ರ ಪಡೆದು, ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ. ಇನ್ನೂ ಕೆಲ ಪ್ರಕರಣಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ವರದಿ ಮಾಡಿದ್ದಾರೆ. ಈ ವಿಭಿನ್ನ ಕ್ರಮಗಳಿಗೆ ಯಾವುದೇ ಸ್ಪಷ್ಟ ವಿವರಣೆ ನೀಡಿಲ್ಲ. ಈ ವಿಷಯದಲ್ಲಿ ಪೂರ್ಣ ತನಿಖೆ ನಡೆಸಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ ಮಾಡಿಸಿಕೊಂಡಿದ್ದ ಮಹಾರಾಷ್ಟ್ರ ರಾಜ್ಯ ಮೂಲದ ಸೋನಾಲಿ ಕದಮ್ ಮೃತಪಟ್ಟಿದ್ದರು. ಭ್ರೂಣಹತ್ಯೆ ನಡೆದಿದ್ದ ಆಸ್ಪತ್ರೆಯನ್ನು ಸೀಜ್ ಮಾಡಿ, ಕವಿತಾ ಬಾಡನವರ ಎಂಬುವರನ್ನು ಬಂಧಿಸಲಾಗಿತ್ತು. 2019 ಹಾಗೂ 2022 ರಲ್ಲಿ ಇಲ್ಲಿ ಭ್ರೂಣಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆಗ ಮುಚ್ಚಳಿಕೆ ಬರೆಸಿಕೊಂಡು ಬಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.