ADVERTISEMENT

ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ: ₹1200 ಕೋಟಿ ಮೊತ್ತದ ಕಾಮಗಾರಿ

ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ: ಚರಂತಿಮಠ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:25 IST
Last Updated 30 ಆಗಸ್ಟ್ 2021, 15:25 IST
ವೀರಣ್ಣ ಚರಂತಿಮಠ
ವೀರಣ್ಣ ಚರಂತಿಮಠ   

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ₹1200 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದರಲ್ಲಿ ಬಾಗಲಕೋಟೆ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ₹847 ಕೋಟಿ ಹಾಗೂ ಬಾಗಲಕೋಟೆ ನಗರದ ವ್ಯಾಪ್ತಿಯಲ್ಲಿ ₹335 ಕೋಟಿ ಮೊತ್ತದ ಕಾಮಗಾರಿಗಳು ಸೇರಿವೆ ಎಂದರು.

ಜಿಲ್ಲಾಡಳಿತ ಭವನದ ದುರಸ್ತಿ ಹಾಗೂ ನವೀಕರಣಕ್ಕೆ ₹5.60 ಕೋಟಿ, ಜಿಲ್ಲಾ ಕ್ರೀಡಾಂಗಣದ ನವೀಕರಣಕ್ಕೆ ₹3.20 ಕೋಟಿ, ನವನಗರದ ಎಪಿಎಂಸಿ ಸರ್ಕಲ್‌ನಿಂದ ಮುಚಖಂಡಿವರೆಗೆ ಆರುಪಥದ ರಸ್ತೆ ನಿರ್ಮಾಣಕ್ಕೆ ₹19 ಕೋಟಿ, ಬಾದಾಮಿ ರಸ್ತೆಯಿಂದ ಮುಚಖಂಡಿವರೆಗೆ 2.8 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹16 ಕೋಟಿ, ಮುಚಖಂಡಿಯಿಂದ 6.4 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ₹27 ಕೋಟಿ ವ್ಯಯಿಸಲಾಗುತ್ತಿದೆ ಎಂದರು.

ADVERTISEMENT

ನವನಗರ ಮೊದಲ ಹಂತದ ಸೆಕ್ಟರ್‌ಗಳಲ್ಲಿ ರಸ್ತೆಗಳ ಡಾಂಬರೀಕರಣ, ಚರಂಡಿ, ಉದ್ಯಾನವನ ನಿರ್ಮಾಣಕ್ಕೆ ₹15 ಕೋಟಿ, ನವನಗರ ಎರಡನೇ ಹಂತದಲ್ಲಿ ಶಾಲೆ, ಕಾಲೇಜು ಕಟ್ಟಡ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ₹26.50 ಕೋಟಿ, ವಿದ್ಯುತ್ ಚಿತಾಗಾರಕ್ಕೆ ₹ 4 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಬಾಗಲಕೋಟೆ ತಾಲ್ಲೂಕಿನ ಸುತಗುಂಡಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾದರಿ ಕೇಂದ್ರವಾಗಿಸಲು ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರದಿಂದ ಅನುಮೋದನೆ ಬಾಕಿ ಇದೆ. ಚಿಟಕಿನಕೊಪ್ಪದಲ್ಲಿ ₹22.50 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣವಾಗುತ್ತಿದೆ.

ಅಭಿವೃದ್ಧಿ ಕಾಮಗಾರಿಗಳಲ್ಲಿ ಗ್ರಾಮೀಣ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳು, ಆರೋಗ್ಯ, ಶಿಕ್ಷಣ ಕ್ಷೇತ್ರದ ಮೂಲ ಸೌಕರ್ಯ ಒಳಗೊಂಡಿವೆ. ಉಜ್ವಲಾ ಯೋಜನೆಯಡಿ 17 ಸಾವಿರ ಬಡ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.