ಬಾಗಲಕೋಟೆ: ‘ಶಾಸಕ ವಿಶೇಷ ಅನುದಾನದಲ್ಲಿ ನಗರಸಭೆಯ ಎಲ್ಲ ಸದಸ್ಯರಿಗೆ ₹8 ಲಕ್ಷ ನೀಡಲಾಗುವುದು’ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ‘ವಿಶೇಷ ಅನುದಾನವಾಗಿ ₹4.15 ಕೋಟಿ ಬಿಡುಗಡೆಯಾಗಿದೆ. ಪ್ರತಿ ಸದಸ್ಯರಿಗೆ ₹5 ಲಕ್ಷ ನೀಡಲು ಒಪ್ಪಿಗೆ ಸೂಚಿಸಿದ್ದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರಿಗೂ ಒಂದೇ ಮೊತ್ತ ನೀಡಲಾಗುವುದು’ ಎಂದರು.
‘ಹೆಚ್ಚಿನ ಅನುದಾನ ನೀಡಬೇಕು ಎಂಬ ಕೆಲ ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಅವರು, ₹8 ಲಕ್ಷ ನೀಡಲಾಗುವುದು. ಉಳಿದ ಒಂದಷ್ಟು ಅನುದಾನವನ್ನು ವಿವಿಧ ವಾರ್ಡ್‌ಗಳಲ್ಲಿ ಅವಶ್ಯವಿರುವ ಕಾಮಗಾರಿಗಳನ್ನು ಮಾಡಲು ಬಳಸಿಕೊಳ್ಳಲಾಗುವುದು. ಕ್ರಿಯಾ ಯೋಜನೆಗೆ ಸದಸ್ಯರಿಂದ ಕಾಮಗಾರಿ ಪಟ್ಟಿ ಪಡೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆಯ ನಾಲ್ಕು ತಿಂಗಳ ಜಮ ಖರ್ಚಿಗೆ, ಆಶ್ರಯ ಯೋಜನೆಯಲ್ಲಿ ಮನೆ ಪಡೆದ ಫಲಾನುಭವಿಗಳ ಮೃತರಾಗಿದ್ದು, ಅವರ ನೇರ ವಾರಸುದಾರರಿಗೆ ಮನೆ ಖಾತೆ ಬದಲಾವಣೆ ಮಾಡಲು, ಬೀದಿ ದೀಪಗಳ ನಿರ್ವಹಣೆ ಟೆಂಡರ್ ಕರೆಯಲು, ಮೀನುಗಾರಿಕೆ ಸಂಘ ನೋಂದಣಿ, ವಿವಿಧ ಶಾಖೆಗಳಲ್ಲಿನ ನಿರುಪಯುಕ್ತ ವಸ್ತುಗಳ ವಿಲೇವಾರಿಗೆ ಒಪ್ಪಿಗೆ ನೀಡಲಾಯಿತು.
ಕೆಡವಿದ ಮನೆಗಳ ನಿರ್ಮಾಣ ಮಾಡಿಕೊಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ‘ವಾರದ ಮುಂಚೆಯೇ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಬಂದಿಲ್ಲ. ಅವರ ವಿರುದ್ಧ ಕ್ರಮಕ್ಕೆ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ನಗರಸಭೆ ಪೌರಾಯುಕ್ತ ವಾಸಣ್ಣ ಹೇಳಿದರು.
ಸದಸ್ಯ ಶ್ರೀನಿವಾಸ ಸಜ್ಜನ ಮಾತನಾಡಿ, ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿದರು.
ಪೌರಾಯುಕ್ತ ವಾಸಣ್ಣ ಮಾತನಾಡಿ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಅವುಗಳನ್ನು ಸ್ಥಳಾಂತರ ಮಾಡುವಂತಿಲ್ಲ ಎಂದರು.
ಶಾಸಕ ಎಚ್.ವೈ. ಮೇಟಿ ಮಾತನಾಡಿ, ನಾಯಿಗಳನ್ನು ಒಂದೆಡೆ ಕೂಡಿ ಹಾಕಿ ಸಾಕುವ ಸಲುವಾಗಿ ಬಿಟಿಡಿಎ ಗೆ ಜಾಗ ಕೇಳಲಾಗಿದೆ. ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸದಸ್ಯ ಚೆನ್ನವೀರ ಅಂಗಡಿ ಮಾತನಾಡಿ, ದಡ್ಡೆನವರ ಕ್ರಾಸ್‌ನಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆಯಲ್ಲಿ ಒಳಚರಂಡಿಯ ಎತ್ತರ ಹೆಚ್ಚಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದರು. ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸದಸ್ಯ ವೀರಣ್ಣ ಶಿರಗಣ್ಣವರ ಮಾತನಾಡಿ, ಈ ಮೊದಲು ಬಿಟಿಡಿಎ ನಿರ್ವಹಣೆ ಮಾಡುವುದಾಗಿ ವಿದ್ಯಾಗಿರಿ ಯುಜಿಡಿ ಸಮಸ್ಯೆ ಇರಲಿಲ್ಲ. ಈಗ ಸಮಸ್ಯೆ ಎದುರಾಗಿದೆ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಚ್.ವೈ. ಮೇಟಿ, ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸಭಾಪತಿ ಯಲ್ಲಪ್ಪ ನಾರಾಯಣಿ, ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾ ರಾವ್, ವಿಧಾನ ಪರಿಷತ್ ಪಿ.ಎಚ್. ಪೂಜಾರ ಇದ್ದರು.
ಕಾಟನ್ ಮಾರುಕಟ್ಟೆ ಲೀಸ್: ಚರ್ಚಿಸಿ ನಿರ್ಧಾರ
ಬಾಗಲಕೋಟೆ: ಇಲ್ಲಿನ ಕಾಟನ್ ಮಾರುಕಟ್ಟೆ ಲೀಸ್ ಅವಧಿ ಮುಂದುವರೆಸುವ ಕುರಿತಂತೆ ನಗರಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು. ಕಾಟನ್ ಮಾರುಕಟ್ಟೆ ಲೀಸ್ ಅವಧಿಯನ್ನು ಮುಂದುವರೆಸಲು ಅನುಮತಿ ಕೋರಿ ಸಭೆಯಲ್ಲಿ ವಿಷಯ ಮಂಡಿಸಲಾಯಿತು. ಸದಸ್ಯರಾದ ಬಸವರಾಜ ಅವರಾದಿ ಶ್ರೀನಿವಾಸ ಸಜ್ಜನ ಸೇರಿದಂತೆ ಬಿಜೆಪಿ ಸದಸ್ಯರು ಲೀಸ್ ಮುಂದುವರೆಸಬೇಕು ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಾಜಿಸಾಬ್ ದಂಡಿನ ಶ್ರೀಮಂತರಿಗೆ ನೀಡಿ ಅವರನ್ನು ಶ್ರೀಮಂತರನ್ನಾಗಿಸಬೇಡಿ. ಸಾಮಾಜಿಕ ನ್ಯಾಯ ಒದಗಿಸಿರಿ ಹಿಂದುಳಿದವರಿಗೆ ನೀಡಿ ಎಂದು ಆಗ್ರಹಿಸಿದರು. ಅಧ್ಯಕ್ಷೆ ಸವಿತಾ ಮಾತನಾಡಿ ಹೆಚ್ಚಿನ ಸದಸ್ಯರ ಹೇಳಿಕೆಯಂತೆ ಮುಂದುವರೆಸಲಾಗುವುದು ಎಂದರು. ಆಗ ಮಧ್ಯಪ್ರವೇಶಿಸಿದ ಶಾಸಕ ಎಚ್.ವೈ. ಮೇಟಿ ಎಲ್ಲ ವಿಷಯವನ್ನು ಮತಕ್ಕೆ ಹಾಕಲು ಸಾಧ್ಯವಿಲ್ಲ. ಕೆಲವೊಂದು ವಿಷಯವನ್ನು ಚರ್ಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅಧ್ಯಕ್ಷೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.