ADVERTISEMENT

ಮಾತೃಭಾಷೆಯಿಂದ ಆತ್ಮವಿಶ್ವಾಸ ಹೆಚ್ಚಳ: ಕವಿ ಸತ್ಯಾನಂದ ಪಾತ್ರೋಟ

ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:52 IST
Last Updated 4 ನವೆಂಬರ್ 2025, 4:52 IST
ಬಾಗಲಕೋಟೆಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಶನಿವಾರ ಹಮ್ಮಿಕೊಂಡಿದ್ದ ಡೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನಕ್ಕೆ ಕವಿ ಸತ್ಯಾನಂದ ಪಾತ್ರೋಟ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಶನಿವಾರ ಹಮ್ಮಿಕೊಂಡಿದ್ದ ಡೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನಕ್ಕೆ ಕವಿ ಸತ್ಯಾನಂದ ಪಾತ್ರೋಟ ಚಾಲನೆ ನೀಡಿದರು   

ಬಾಗಲಕೋಟೆ: ‘ಕನ್ನಡವು ಬದುಕಿನ ಭಾಗವಾಗಬೇಕು. ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಭಾಷೆ ವ್ಯಾಮೋಹ ಎಲ್ಲ ಭಾಗದಲ್ಲೂ ಪಸರಿಸುತ್ತಿದೆ. ಮಾತೃ ಭಾಷೆ ನೀಡಿದಷ್ಟು ಆತ್ಮವಿಶ್ವಾಸ ಬೇರೆ ಭಾಷೆ ನೀಡಲಾರವು. ಕನ್ನಡವಿದ್ದಾಗ ಮಾತ್ರ ನಾವು ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಕವಿ ಸತ್ಯಾನಂದ ಪಾತ್ರೋಟ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿಪೂರ್ವ ವಸತಿ ಕಾಲೇಜು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೊಡ್ಡಾಟ, ತೊಗಲು ಗೊಂಬೆಯಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಜಾತಿ, ವಲಯಗಳನ್ನು ಮೀರಿ ಮಾತೃ ಭಾಷೆಯನ್ನು ಪ್ರೀತಿಸಿ. ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಧರ್ಮ ಎನ್ನುವಂತಾಗಬೇಕಿದೆ. ಸರ್ವ ಜನಾಂಗದವರ ಅಭಿವೃದ್ಧಿಯಾಗಬೇಕು. ಎಲ್ಲ ಸಮುದಾಯದವರು ಪರಸ್ಪರ ಪ್ರೀತಿಯಿಂದಿರಬೇಕು’ ಎಂದು ಹೇಳಿದರು.

ADVERTISEMENT

‘ಅಲ್ಪಸಂಖ್ಯಾತರೊಂದಿಗೆ ಬಹುಸಂಖ್ಯಾತರು ಬೆರೆಯುವಂತಾಗಬೇಕು. ಕನ್ನಡ ಸಾಹಿತ್ಯಕ್ಕೆ ಅನ್ಯಧರ್ಮೀಯರೂ ಕೊಡುಗೆ ನೀಡಿದ್ದಾರೆ. ಇದಕ್ಕೆ ಸಂತ ಶಿಶುನಾಳ ಷರೀಫರು ಉತ್ತಮ ಉದಾಹರಣೆ’ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಂಸ್ಕೃತಿ ಚಿಂತಕ ಸರ್ಜಾಶಂಕರ ಹರಳಿಮಠ, ‘ಕನ್ನಡ ಸಾಹಿತ್ಯ ಎಂದರೆ ಅದು ಬದುಕಿನ ಭಾವನೆ. ಕೇವಲ ಬರಹ ರೂಪಕ್ಕೆ ಸೀಮಿತವಾಗದೆ ಹೃದಯದ ದ್ವನಿಯಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್. ದುರ್ಗಾದಾಸ ಮಾತನಾಡಿ, ‘ಕಲೆ ಸಾಹಿತ್ಯ ಕೇವಲ ಒಂದು ಜಾತಿಗೆ ಅಥವಾ ವರ್ಣಕ್ಕೆ ಸೀಮಿತವಾಗಿಲ್ಲ. ದೊಡ್ಡಾಟ, ಬಯಲಾಟಗಳಲ್ಲ ಸಂತ್ರಸ್ತರ ದ್ವನಿಯಾಗಿದ್ದವು. ಆದರೆ ಆಧುನಿಕತೆಯ ಭರಾಟೆಯಲ್ಲಿ ಕಲೆಗಳು ಮುಳುಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬಾದಾಮಿ ತಾಲ್ಲೂಕಿನ ಕಾಕನೂರ ದುರ್ಗಾ ಶಕ್ತಿ ಕಲಾ ಸಂಘದ ಕಲಾವಿದರು ‘ತೊಗಲು ಗೊಂಬೆಯಾಟ’, ಹುಬ್ಬಳ್ಳಿ ಸಂಕಲ್ಪ ಪ್ರದರ್ಶಕ ಕಲೆಗಳ ಹಾಗೂ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ದೊಡ್ಡಾಟದ ‘ಗಿರಿಜಾ ಕಲ್ಯಾಣ’ ಪ್ರಸಂಗ ಪ್ರದರ್ಶಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ, ಸದಸ್ಯ ಲಕ್ಷ್ಮಣ ದೇಸಾರಟ್ಟಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿಪೂರ್ವ ವಸತಿ ಕಾಲೇಜಿನ ಪ್ರಾಚಾರ್ಯ ಎಂ.ಎನ್ ಗರಗ, ಅಬ್ದುಲ್ ಕಲಾಂ ವಸತಿ ಶಾಲೆ ಪ್ರಾಚಾರ್ಯ ಆನಂದ ದದ್ದೂರ, ಇತಿಹಾಸ ಉಪನ್ಯಾಸಕ ಕೇಶವ ಸಾಲಮಂಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.