ADVERTISEMENT

ಮುಚಖಂಡಿ: ಅದ್ಧೂರಿಯಾಗಿ ನಡೆದ ವೀರಭದ್ರೇಶ್ವರ ಜಾತ್ರೆ 

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:26 IST
Last Updated 17 ಡಿಸೆಂಬರ್ 2019, 14:26 IST
ಬಾಗಲಕೋಟೆ ಸಮೀಪ ಮುಚಖಂಡಿಯಲ್ಲಿ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿ ರಥೋತ್ಸವ ನಡೆಯಿತು.  
ಬಾಗಲಕೋಟೆ ಸಮೀಪ ಮುಚಖಂಡಿಯಲ್ಲಿ ವೀರಭದ್ರೇಶ್ವರ ಜಾತ್ರೆಯ ನಿಮಿತ್ತ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿ ರಥೋತ್ಸವ ನಡೆಯಿತು.     

ಬಾಗಲಕೋಟೆ:ಕಾರ್ತೀಕೋತ್ಸವದ ಅಂಗವಾಗಿ ಸಮೀಪದ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು.

ಕಾರ್ತೀಕೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.ಬೆಣ್ಣೂರಿನಿಂದ ಕಳಸ ಹಾಗೂ ವೀರಾಪುರದ ಹಗ್ಗವನ್ನು ತಂದು ರಥೋತ್ಸವಕ್ಕೆ ನೀಡಲಾಯಿತು. ಜಾತ್ರೆ ನಿಮಿತ್ತ ದೊಡ್ಡ ರಥವನ್ನು ವಿವಿಧ ಬಣ್ಣದ ಪೇಪರ್, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವ ಗ್ರಾಮದ ಅಗಸಿ ಬಾಗಿಲವರೆಗೆ ಸಾಗಿತು.

ರಥೋತ್ಸವ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಭಕ್ತರು ಉತ್ತತ್ತಿ, ಚುರುಮುರಿ ಹಾಗೂ ಬಾಳೆ ಹಣ್ಣುಗಳನ್ನು ರಥೋತ್ಸವಕ್ಕೆ ಅರ್ಪಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಮಹಿಳೆಯರ ಆರುತಿ ಹಾಗೂ ನಂದಿಕೋಲು, ವಾಧ್ಯಮೇಳದೊಂದಿಗೆ ಪಲ್ಲಕ್ಕಿಯ ರಥೋತ್ಸವದ ಜೊತೆಗೆ ಸಾಗಿತು.

ADVERTISEMENT

ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿ‌ತ್ತು. ಸರದಿಯಲ್ಲಿ ನಿಂತ ಭಕ್ತರು ವೀರಭದ್ರೇಶ್ವರ ದರ್ಶನ ಪಡೆದು ಪುನೀತರಾದರು.ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಿಂದ ಭದ್ರತೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.