ADVERTISEMENT

ಹುನಗುಂದ: ಸ್ವಚ್ಛತೆ, ಸೌಲಭ್ಯ ಕೊರತೆಗಳ ಆಗರ ನಾಗೂರು ಗ್ರಾಮ

ಸಂಗಮೇಶ ಹೂಗಾರ
Published 15 ಅಕ್ಟೋಬರ್ 2025, 5:07 IST
Last Updated 15 ಅಕ್ಟೋಬರ್ 2025, 5:07 IST
<div class="paragraphs"><p>ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮ ಪಂಚಾಯಿತಿ ಎದುರು ರಾಜ್ಯ ಹೆದ್ದಾರಿ ಪಕ್ಕದ ಖಾಲಿ ಜಾಗದಲ್ಲಿ ಕೊಳಚೆ ನೀರು ನಿಂತಿದೆ</p></div>

ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮ ಪಂಚಾಯಿತಿ ಎದುರು ರಾಜ್ಯ ಹೆದ್ದಾರಿ ಪಕ್ಕದ ಖಾಲಿ ಜಾಗದಲ್ಲಿ ಕೊಳಚೆ ನೀರು ನಿಂತಿದೆ

   

ಹುನಗುಂದ: ತಾಲ್ಲೂಕಿನ ನಾಗೂರು ಗ್ರಾಮದ ಕೆಲವು ಓಣಿ ಮತ್ತು ಬಡಾವಣೆಗಳು ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಸ್ವಚ್ಛತೆಯೂ ಕಾಣುತ್ತಿಲ್ಲ.

ನಾಗೂರು ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಗ್ರಾಮ ಪಂಚಾಯಿತಿ ಎದುರು ರಾಜ್ಯ ಹೆದ್ದಾರಿ ಬದಿಯಲ್ಲಿರುವ ಪಕ್ಕದ ಖಾಲಿ ಜಾಗದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಕೊಳಚೆ ನೀರಿನಲ್ಲಿ ಹುಲ್ಲು, ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಬಿದ್ದು ನಾರುತ್ತಿದೆ. ಕೆಲವರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ನಾತ ಬೀರುತ್ತಿದೆ. ಈ ಜಾಗದ ಪಕ್ಕದಲ್ಲಿ ಅಂಗನವಾಡಿ ಇದ್ದು, ಇಲ್ಲಿಯ ಮಾಲಿನ್ಯದಿಂದ ಮಕ್ಕಳು ಕಾಯಿಲೆ ಪೀಡಿತರಾದರೆ ಎಂಬ ಆತಂಕ ಉಂಟಾಗಿದೆ. 

ADVERTISEMENT

ಗ್ರಾಮದ ಕೆಲ ಓಣಿಗಳು, ರೇಣುಕಾ ನಗರ ಹಾಗೂ ಬಸವ ನಗರದ ಹೊಸ ಬಡಾವಣೆಗಳ ಕೆಲವು ಕಡೆಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮತ್ತು ಸಿಸಿ ರಸ್ತೆ ಇಲ್ಲ. ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತದೆ. ಮಳೆ ಬಂದಾಗ ರಸ್ತೆಗಳು ಕೆಸರು ಗದ್ದೆಗಳಾಗುತ್ತವೆ. ಮಳೆ ಬಂದಾಗಿ ಕೊಳಚೆ ನೀರು ಇದೇ ರಸ್ತೆಯಲ್ಲಿ ಹರಿದು ಜನರು ಸಂಚರಿಸಲು ಅಸಾಧ್ಯವಾದ ಸ್ಥಿತಿ ಉಂಟಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮವನ್ನು 2018ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ. ಆದರೆ, ಇದು ಘೋಷಣೆಗಷ್ಟೇ ಸೀಮಿತವಾಗಿದೆ. ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಬದಿಯಲ್ಲಿ ಬಯಲು ಬಹಿರ್ದೆಸೆ ಮುಂದುವರಿದಿದೆ. ಬಯಲು ಶೌಚಾಲಯದ ದುಷ್ಪರಿಣಾಮದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಬಸ್‌ ತಂಗುದಾಣ ಕುಡುಕರ ತಾಣ

ಗ್ರಾಮ ಪಂಚಾಯಿತಿ ಎದುರು ಬಸ್ ತಂಗುದಾಣವಿದೆ. ಕಟ್ಟಡ ಶಿಥಿಲವಾಗಿದ್ದು ಕುಡುಕರ ತಾಣವಾಗಿ ಬದಲಾಗಿದೆ. ಕಟ್ಟಡದ ಮೂಲೆಗಳಲ್ಲಿ ಮದ್ಯದ ಪ್ಯಾಕೆಟ್ ನೀರಿನ ಬಾಟಲ್‌ಗಳು ಪ್ಲಾಸ್ಟಿಕ್ ಲೋಟ ಹಾಗೂ ಕಸ ತುಂಬಿದೆ. ನಿತ್ಯ ಶಾಲೆ– ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ಬೇರೆ ಬೇರೆ ಊರುಗಳಿಗೆ ಹೋಗುವ ಸಾರ್ವಜನಿಕರು ಈ ತಂಗುದಾಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ ಗಂಟೆಗಟ್ಟಲೇ ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ

ಶಿಥಿಲಾವಸ್ಥೆಯಲ್ಲಿರುವ ಬಸ್ ತಂಗುದಾಣವನ್ನು ದುರಸ್ತಿ ಮಾಡಿಸಿ ಪ್ರಯಾಣಿಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ಅಮರಪ್ಪ, ಗ್ರಾಮಸ್ಥ ನಾಗೂರು
15ನೇ ಹಣಕಾಸು ಯೋಜನೆಯ ಅನುದಾನ ಹಾಗೂ ನರೇಗಾ ಯೋಜನೆಯಡಿ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು
- ತಿಪ್ಪಣ್ಣ ಕುಂಬಾರ, ಪಿಡಿಒ ನಾಗೂರು
ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ಬಸ್‌ ತಂಗುದಾಣದ ದುಃಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.