ಮಹಾಲಿಂಗಪುರ: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಸಮೀಪದ ನಂದಗಾಂವ ಗ್ರಾಮ ಭಾನುವಾರ ನಡುಗಡ್ಡೆಯಾಗಿದೆ. ಹೊಸ ನಂದಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಆವರಿಸಿದೆ.
ಭಾನುವಾರ ಸಂಜೆ ಹಿಡಕಲ್ ಜಲಾಶಯ ಮತ್ತು ಹಿರಣ್ಯಕೇಶಿ ನದಿ ಸೇರಿ ಧುಪದಾಳ ಜಲಾಶಯ ಮಾರ್ಗವಾಗಿ 69,692 ಕ್ಯುಸೆಕ್, ಮಾರ್ಕಂಡೇಯ ಜಲಾಶಯದಿಂದ 8,130 ಕ್ಯುಸೆಕ್, ಬಳ್ಳಾರಿ ನಾಲಾದಿಂದ 2,953 ಕ್ಯುಸೆಕ್ ಸೇರಿ ಒಟ್ಟು 80,775 ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿಬಿಡಲಾಗಿದೆ.
‘ನಂದಗಾಂವ ಗ್ರಾಮದಲ್ಲಿ 52 ಕುಟುಂಬಗಳ 318 ಜನರು, 240 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಮನೆ ಇರದ ಕುಟುಂಬಗಳಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ನೋಡಲ್ ಅಧಿಕಾರಿ ವೆಂಕಟೇಶ ಬೆಳಗಲ್ಲ ತಿಳಿಸಿದರು.
ಢವಳೇಶ್ವರದಲ್ಲಿ ಲಕ್ಷ್ಮಿದೇವಿ, ದುರ್ಗಾದೇವಿ, ಕೋರೆಮ್ಮ ದೇವಿ, ಶೆಟ್ಟೆಮ್ಮ ದೇವಿ, ಹೊನ್ನೆಮ್ಮ ದೇವಿ ದೇವಸ್ಥಾನಗಳು ಜಲಾವೃತಗೊಂಡಿವೆ.
ಢವಳೇಶ್ವರ ಗ್ರಾಮಕ್ಕೆ ಶಾಸಕ ಸಿದ್ದು ಸವದಿ ಭಾನುವಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ನೋಡಲ್ ಅಧಿಕಾರಿ ವೆಂಕಟೇಶ ಬೆಳಗಲ್ಲ, ಪಶು ವೈದ್ಯಾಧಿಕಾರಿ ವಿಶಾಲ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಜಮಾದಾರ, ಮುಖಂಡರಾದ ಶ್ರೀಶೈಲ ಪಟ್ಟಣಶೆಟ್ಟಿ, ಮಹಾಲಿಂಗ ಪಟ್ಟಣಶೆಟ್ಟಿ, ಸತೀಶ ಪಟ್ಟಣಶೆಟ್ಟಿ, ಶಂಕರಗೌಡ ಪಾಟೀಲ, ಚನ್ನಪ್ಪ ಶಿವಾಪುರ, ಅಶೋಕ ಕಾಶೀರಗೋಳ, ಮಹಾದೇವ ತೇಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.