ADVERTISEMENT

ಮೋದಿ ಬದಲು ಕಾಂಗ್ರೆಸ್ ಇದ್ದಿದ್ದರೆ ದೇಶದ ಅರ್ಧ ಜನ ಸಾಯುತ್ತಿದ್ದರು: ಸಿದ್ದು ಸವದಿ

​ಪ್ರಜಾವಾಣಿ ವಾರ್ತೆ
Published 19 ಮೇ 2021, 8:13 IST
Last Updated 19 ಮೇ 2021, 8:13 IST
ಸಿದ್ದು ಸವದಿ
ಸಿದ್ದು ಸವದಿ   

ಬಾಗಲಕೋಟೆ: 'ಅಕಸ್ಮಾತ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇರದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕೋವಿಡ್‌ನಿಂದ ದೇಶದ ಅರ್ಧಕ್ಕೂ ಹೆಚ್ಚು ಜನರು ಸಾಯುತ್ತಿದ್ದರು'ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿರೋಧ ಪಕ್ಷ ಎಂದಾಕ್ಷಣ ಬರೀ ಆಡಳಿತ ಮಾಡುವವರ ಕಾಲು ಜಗ್ಗುವುದಲ್ಲ. ಸಾವಿನಲ್ಲೂ ರಾಜಕೀಯ ಮಾಡುವುದು ಸಲ್ಲ. ಬದಲಿಗೆ ಮಾರ್ಗದರ್ಶನ ಮಾಡಲಿ. ಪಕ್ಕದ ಮಹಾರಾಷ್ಟದಲ್ಲಿ ನಿಮ್ಮದೇ ಪಕ್ಷದ ಬೆಂಬಲದ ಸರ್ಕಾರ ಅಧಿಕಾರದಲ್ಲಿದೆ. ಅಲ್ಲಿ ಕೋವಿಡ್‌ನಿಂದ ಇಡೀ ದೇಶದಲ್ಲಿಯೇ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ'ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

'ಕೋವಿಡ್ ಲಸಿಕೆ ಬಗ್ಗೆ ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿದ್ದರಿಂದಲೇ ಜನರು ದೂರ ಉಳಿದರು. ಈಗ ಏಕಾಏಕಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿರುವುದರಿಂದ ಕೊರತೆ ಎದುರಾಗಿದೆ. ಈಗ ಲಸಿಕೆ ಕೊರತೆಯ ಸಂಕಷ್ಟಕ್ಕೆ ಕಾಂಗ್ರೆಸ್‌ ನಾಯಕರೇ ಕಾರಣರಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು'ಎಂದು ಒತ್ತಾಯಿಸಿದರು.

ADVERTISEMENT

'ಮಾಜಿ ಸಚಿವೆ ಉಮಾಶ್ರಿ ಕೋವಿಡ್‌ಗೆ ಹೆದರಿ ಬೆಂಗಳೂರಿನಲ್ಲಿ ಕುಳಿತು ನನ್ನ ವಿರುದ್ಧ ಆಡಿಯೊ, ವಿಡಿಯೊ ಮಾಡಿಸುವುದು ಅಲ್ಲ. ಕ್ಷೇತ್ರಕ್ಕೆ ಬಂದು ಜನರ ಸಮಸ್ಯೆಗೆ ದನಿಯಾಗಲಿ' ಎಂದು ವ್ಯಂಗ್ಯವಾಡಿದರು.

'ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಬಹಳಷ್ಟು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರತಿ ದಿನರಾಹುಲ್‌ ಗಾಂಧಿಗೆ ಪ್ರಧಾನಮಂತ್ರಿ ಟೀಕೆ ಮಾಡುವುದೇ ಒಂದು ದೊಡ್ಡ ಕಾರ್ಯಕ್ರಮವಾಗಿ ಬಿಟ್ಟಿದೆ. ಅವನ ತಲೆಯೂ ಬಹುಶಃ ಮೆಚ್ಯೂರಿಟಿ ಇದ್ದಂಗೆ ಕಾಣೊಲ್ಲ'ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಟೀಕಿಸಿದರು.

'ರಾಹುಲ್‌ ಗಾಂಧಿ ಅಮ್ಮನ ತವರು ಮನೆ ಇಟಲಿಯಲ್ಲಿ ಆರು ಕೋಟಿ ಜನರು ಇಲ್ಲ. ಕೋವಿಡ್ ಮೊದಲ ಅಲೆಯ ವೇಳೆ ಫುಟ್‌ಪಾತ್‌ ಮೇಲೆ ಜನಸು ಸತ್ತು ಬಿದ್ದಿದ್ದರು. ಎಲ್ಲಿ ಬೇಕೊ ಅಲ್ಲೆಲ್ಲ ಜನ ಸತ್ತರು. ನಾವು ನೀವೆಲ್ಲಾ ಟೀವಿಯಲ್ಲಿ ನೋಡಿದ್ದೇವೆ. 130 ಕೋಟಿ ಜನರು ಇರುವ ಈ ದೇಶದಲ್ಲಿ ಮೋದಿ ವ್ಯಾಕ್ಸಿನ್ ಹಾಕಿಸಲು ಮುಂದಾದರೆ ಅದು ಮೋದಿ ವ್ಯಾಕ್ಸಿನ್. ಯಾರೂ ಹಾಕಿಸಿಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್ ಪಕ್ಷ ಈ ಪರಿಸ್ಥಿತಿಗೆ ಬಂದರೂ ಕೋವಿಡ್ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದು ಬಿಡುತ್ತಿಲ್ಲ'ಎಂದು ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.