ADVERTISEMENT

ಬಾಗಲಕೋಟೆ| ಏಕತೆ ಕಾಪಾಡುವುದು ನಮ್ಮ ಕರ್ತವ್ಯ: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:00 IST
Last Updated 23 ನವೆಂಬರ್ 2025, 5:00 IST
ಬಾಗಲಕೋಟೆಯಲ್ಲಿ ಶನಿವಾರ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜನ್ಮ ದಿನ ಅಂಗವಾಗಿ ನಡೆದ ಏಕತಾ ನಡಿಗೆಯ ದೃಶ್ಯ
ಬಾಗಲಕೋಟೆಯಲ್ಲಿ ಶನಿವಾರ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜನ್ಮ ದಿನ ಅಂಗವಾಗಿ ನಡೆದ ಏಕತಾ ನಡಿಗೆಯ ದೃಶ್ಯ   

ಬಾಗಲಕೋಟೆ: ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಶನಿವಾರ ಸರ್ದಾರ್ ವಲ್ಲಭಭಾಯಿ ಪಟೇಲ್‍ರ 150ನೇ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಏಕತಾ ಅಭಿಯಾನದ ಮುಖ್ಯ ಉದ್ದೇಶ ರಾಷ್ಟ್ರಪ್ರೇಮ ಉತ್ತೇಜಿಸುವುದು. ನಾಗರಿಕ ಜವಾಬ್ದಾರಿಯ ಮನೋಭಾವ ಬಿತ್ತುವುದು, ಯುವಕರಲ್ಲಿ ರಾಷ್ಟ್ರೀಯ ಏಕತೆಯ ಬಲಪಡಿಸುವುದಾಗಿದೆ. ಪಟೇಲ್‍ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಎಲ್ಲರೂ ಅಳವಡಿಸಿಕೊಳ್ಳೋಣ ಎಂದರು.

ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ ಮಾತನಾಡಿ, ದೇಶದಲ್ಲಿ ಎಲ್ಲರೂ ಜಾತಿ, ಧರ್ಮಗಳನ್ನು ಮರೆತು ಭಾರತಾಂಬೆ ತಾಯಿಯ ಮಕ್ಕಳಂತೆ ಬಾಳಬೇಕು ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ದೇಶದ ಸ್ವಾತಂತ್ರ್ಯ, ಅಖಂಡ ಭಾರತದ ಕನಸನ್ನು ಕಟ್ಟಿ, ದೇಶದ ಐಕ್ಯತೆಗೆ ಶ್ರಮಿಸಿದ ಪಟೇಲ್ ಅವರು ದೇಶಕ್ಕೆ ಮಾದರಿಯಾಗಿದ್ದರು. ತಮ್ಮ ಉಕ್ಕಿನ ನಡೆಯಿಂದ ಉಕ್ಕಿನಂತಹ ಭಾರತ ನಿರ್ಮಾಣ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಚಾಲಕ ಮಲ್ಲಯ್ಯ ಮೂಗನೂರಮಠ, ಗೌತಮ ರೆಡ್ಡಿ, ಮಾರುತಿ ಪಾಟೋಳಿ ಉಪಸ್ಥಿತರಿದ್ದರು. ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಇದಕ್ಕೂ ಮೊದಲು ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನದವರೆಗೆ ಏಕತಾ ನಡಿಗೆ ಮಾಡಲಾಯಿತು.