ಮಹಾಲಿಂಗಪುರ: ‘ಪ್ರತಿಯೊಬ್ಬ ನಾರಿಯಲ್ಲಿಯೂ ಒಬ್ಬಳು ಮಹಾಕಾಳಿ, ಸರಸ್ವತಿ, ಲಕ್ಷ್ಮಿ ಆವಾಸ ಸ್ಥಾನವಿದೆ. ಅದನ್ನು ಜಾಗೃತಗೊಳಿಸಿಕೊಂಡರೆ ಸಾಮಾನ್ಯ ನಾರಿ ಕೂಡಾ ಎತ್ತರದ ಸ್ಥಾನಕ್ಕೆ ಏರಬಲ್ಲಳು. ಲವ್ ಜಿಹಾದ್‍ನಂತಹ ವ್ಯವಸ್ಥೆಯನ್ನು ಹೊಡೆದೋಡಿಸಲು ಕಾಳಿ ರೂಪ ತೋರಿಸಬೇಕಿದೆ. ಅಂತಹ ಗುಣಗಳನ್ನು ನವರಾತ್ರಿ ಮೂಲಕ ಜಾಗೃತಗೊಳಿಸೋಣ’ ಎಂದು ಉಡುಪಿಯ ವಾಗ್ಮಿ ಪ್ರಕಾಶ್ ಜಿ. ಹೇಳಿದರು.
ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದಿಂದ ನವರಾತ್ರಿ ನಾಲ್ಕನೇ ದಿನವಾದ ಗುರುವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ‘ಭಾರತೀಯ ನಾರಿ ಸಂಸ್ಕೃತಿ’ ಕುರಿತು ಮಾತನಾಡಿದರು.
‘ದೇವಿಯು ಮಹಾಲಕ್ಷ್ಮೀಯಾಗಿ ಬಡತನ ದೂರ ಮಾಡುತ್ತಾಳೆ, ಸರಸ್ವತಿಯಾಗಿ ನಮ್ಮ ಅಜ್ಞಾನವನ್ನು ದೂರ ಮಾಡುತ್ತಾಳೆ. ದುರ್ಗಿಯಾಗಿ ದುಷ್ಟರನ್ನು ದಮನ ಮಾಡುತ್ತಾಳೆ. ಈ ಭಾವ, ಈ ಅನುಸಂಧಾನ ದೇವಿ ಜತೆ ಇದ್ದರೆ ನಮ್ಮ ಮನೆಯ ಮಕ್ಕಳು ಸಾಮಾನ್ಯ ಮಕ್ಕಳಾಗದೆ ವಿಶಿಷ್ಟ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ’ ಎಂದರು.
ಸೊಲ್ಲಾಪುರದ ಮೈಂದರಗಿಯ ಗುರುಹಿರೇಮಠದ ಅಭಿನವ ರೇವಣಸಿದ್ದ ಪಟ್ಟದೇವರು ಶ್ರೀದೇವಿ ಪುರಾಣ ಹೇಳಿದರು. ಗೊರವ, ಜೈನ, ಹಡಪದ ಹಾಗೂ ಮಾಳಿ ಸಮಾಜದ ಮುಖಂಡರು ಶ್ರೀಗಳನ್ನು ಸನ್ಮಾನಿಸಿದರು. ಗುರು ಬಾಡಗಿ, ಜಯವಂತೆ ಬಾಡಗಿ ದಂಪತಿ ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಪುರಾಣದ ನಂತರ ನಡೆದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಶಾಂತ ಅಂಬಿ, ಶ್ರೀಕಾಂತ ನಾಯಿಕ, ರಾಜು ಸಿದ್ದಾಪುರ ಗಾಯನ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.