ADVERTISEMENT

ಬಾಗಲಕೋಟೆ | 19 ಗ್ರಾಮಗಳಿಗೆ ನಿರಂತರ ನೀರು ಪೂರೈಕೆಗೆ ಕ್ರಮ: ಕುರೇರ

ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ, ವಾಟರ್ ಮನ್‍ಗಳಿಗೆ ತರಬೇತಿ 

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:48 IST
Last Updated 6 ಆಗಸ್ಟ್ 2025, 2:48 IST
ಬಾಗಲಕೋಟೆಯಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು ಬೇಕಾದ ಸಿದ್ಧತೆ ಬಗ್ಗೆ ಕಾರ್ಯಾಗಾರ ನಡೆಸಲಾಯಿತು
ಬಾಗಲಕೋಟೆಯಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು ಬೇಕಾದ ಸಿದ್ಧತೆ ಬಗ್ಗೆ ಕಾರ್ಯಾಗಾರ ನಡೆಸಲಾಯಿತು   

ಬಾಗಲಕೋಟೆ: ಜಲಜೀವನ ಮಿಷನ್ ಯೋಜನೆ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ದಿನದ 24 ಗಂಟೆ 19 ಗ್ರಾಮಗಳಲ್ಲಿ ಪೈಲಟ್‌ ಆಧಾರದ ಮೇಲೆ ನೀರು ಸರಬರಾಜು ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.

ಗದ್ದನಕೇರಿ ಹತ್ತಿರವಿರುವ ಕಂಠಿ ರೆಸಾರ್ಟ್‌ನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವಾಟರ್‌ಮನ್‌ಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ನೀರು ಸರಬರಾಜು ಮಾಡಬೇಕಾದ ಹಿನ್ನಲೆಯಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ನೋಡಲ್‌ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಿ ಜಾರಿಗೆ ಯೋಜನೆ ರೂಪಿಸಲಾಗಿದೆ. ನಳಗಳ ಸಂಪರ್ಕ, ಸೋರುವಿಕೆ ತಡೆಗಟ್ಟುವುದು, ಒಎಚ್‌ಪಿ ಮೂಲಕ ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಫೀಡ್‌ಬ್ಯಾಕ್ ಫೌಂಡೇಶನ್ ಸಿಇಒ ಅಜಯ್ ಸಿನ್ಹಾ ಮಾತನಾಡಿ, ದಿನದ 24 ಗಂಟೆ ನೀರು ಸರಬರಾಜು ಮಾಡಲು ಅನುಸರಿಸಬೇಕಾದ ಎಲ್ಲ ಹಂತಗಳನ್ನು ವಿಸ್ತೃತವಾಗಿ ತಿಳಿಸಿದರು. ಸಮುದಾಯದ ಸಹಭಾಗಿತ್ವ, ಎದುರಿಸಬೇಕಾದ ಸವಾಲುಗಳು, ಇಲಾಖೆ, ಸಿಬ್ಬಂದಿ ಕರ್ತವ್ಯ ಮತ್ತು ಪಾಲ್ಗೊಳ್ಳುವ ರೀತಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮನದಟ್ಟು ಮಾಡಿದರು.

ದಿನದ 24 ಗಂಟೆ ನೀರು ಸರಬರಾಜು ಗ್ರಾಮಗಳನ್ನಾಗಿ ಪರಿವರ್ತಿಸುವುದರಿಂದ ದೊರೆಯಬಹುದಾದ ಪ್ರಯೋಜನ, ಬೇಡಿಕೆ– ಪೂರೈಕೆ, ಅದಾಯ–ವೆಚ್ಚ ಹಾಗೂ ಸಹಭಾಗಿದಾರರ ಜವಾಬ್ದಾರಿಗಳ ಬಗ್ಗೆ ಉದಾಹರಣೆ ಮೂಲಕ ವಿವರಿಸಿದರು.

ಪ್ರತಿ ಗ್ರಾಮದಲ್ಲಿ ಸಮುದಾಯ ಸಭೆ ನಡೆಸಿ ಜನರ ಮನ ಪರಿವರ್ತನೆ ಮಾಡುವುದು ಸಹ ಪ್ರಮುಖವಾಗಿದೆ. ಎಲ್ಲ 15 ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಸೇರಿಸಿಕೊಂಡು ವಾಟ್ಸ್‌ ಆ್ಯಪ್‌ ಗುಂಪು ರಚಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯಲೆಕ್ಕ ಅಧೀಕ್ಷಕ ಸಿದ್ದರಾಮೇಶ್ವರ ಉಕ್ಕಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆಕಾಶ್ ಉಪಸ್ಥಿತರಿದ್ದರು.

ಸಾರ್ವಜನಿಕರನ್ನು ಒಳ್ಳಗೊಳ್ಳಿರಿ ವ್ಯಾಟ್ಸ್‌ ಆ್ಯಪ್‌ ಗುಂಪು ರಚಿಸಿಕೊಳ್ಳಿ ಅಧಿಕಾರಿಗಳಿಗೆ ಸೂಕ್ತ ತರಬೇತಿ
19 ಗ್ರಾಮಗಳಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ಮೂಲಕ ಜಲಜೀವನ್‌ ಮಿಷನ್‌ ಸಂಪೂರ್ಣವಾಗಿ ಜಾರಿಗೊಳಿಸಬೇಕು
ಶಶಿಧರ ಕುರೇರ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.