ADVERTISEMENT

ರಬಕವಿ ಬನಹಟ್ಟಿ: ಪ್ರವಾಹ ಭೀತಿ ಇಲ್ಲ

ಹಿಪ್ಪರಗಿ ಜಲಾಶಯಕ್ಕೆ 1,32000 ಕ್ಯೂಸೆಕ್ ಒಳ ಹರಿವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 1:08 IST
Last Updated 20 ಜೂನ್ 2021, 1:08 IST
ರಬಕವಿ ಬನಹಟ್ಟಿ ಹತ್ತಿರ ಕೃಷ್ಣಾ ನದಿ ರಭಸದಿಂದ ಹರಿಯುತ್ತಿದೆ
ರಬಕವಿ ಬನಹಟ್ಟಿ ಹತ್ತಿರ ಕೃಷ್ಣಾ ನದಿ ರಭಸದಿಂದ ಹರಿಯುತ್ತಿದೆ   

ರಬಕವಿ ಬನಹಟ್ಟಿ: ಶನಿವಾರ ಸ್ಥಳೀಯ ಹಿಪ್ಪರಗಿ ಜಲಾಶಯಕ್ಕೆ 1,32,000 ಕ್ಯುಸೆಕ್‍ ಒಳ ಹರಿವು ಇದ್ದು, 1,31,000 ಹೊರ ಹರಿವು ಇದೆ. ಕೃಷ್ಣಾ ನದಿಗೆ ಸದ್ಯದಲ್ಲಿ ಯಾವುದೆ ರೀತಿಯ ಪ್ರವಾಹ ಭೀತಿ ಇಲ್ಲ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಶನಿವಾರ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿ, ಕೃಷ್ಣಾ ನದಿಗೆ ಎರಡೂವರೆ ಲಕ್ಷ ಕ್ಯುಸೆಕ್ ನೀರು ಬಂದರೆ ಮಾತ್ರ ಸ್ವಲ್ಪ ಮಟ್ಟಿನ ಸಮಸ್ಯೆ ಆಗಲಿದೆ. ಪ್ರವಾಹದ ಮುಂಜಾಗ್ರತೆಗಾಗಿ ಸಾಂಗಲಿಯಲ್ಲಿ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರವಾಹದ ಕುರಿತು ಇವರು ದಿನ ನಿತ್ಯ ಮಾಹಿತಿಯನ್ನು ನೀಡಲಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹಾಗೂ ಅಲ್ಲಿಯ ಜಲಾಶಯದಿಂದ ನೀರು ಬಿಡುವ ಪ್ರಮಾಣವನ್ನು ನೋಡಿಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಈಗಾಗಲೇ ನದಿ ತೀರದ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಸಭೆ ಕರೆದು ಎಲ್ಲ ರೀತಿಯ ಮಾಹಿತಿಯನ್ನು ನೀಡಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ನೋಡಲ್‍ ಅಧಿಕಾರಿ ಹಾಗೂ ಕಾರ್ಯಪಡೆ ರಚನೆ ಮಾಡಲಾಗಿದೆ. ನದಿ ತೀರದ ಜನರು ಭಯ ಪಡುವ ಅಗತ್ಯವಿಲ್ಲ. ಪ್ರವಾಹ ಎದುರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ ಎಂದರು.

ADVERTISEMENT

ಹಿಪ್ಪರಗಿ ಜಲಾಶಯದಲ್ಲಿ 521.60 ಮೀಟರ್ ನೀರು ಇದ್ದು, 3.15 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ 143 ಮಿ.ಮೀ, ದೂಧಗಂಗಾ 56 ಮಿ.ಮೀ, ವಾರಾಣಾ 52 ರಾಧಾನಗರಿ 124 ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಎಸ್‍.ಐ.ಸೂಡಿ, ಸಿಪಿಐ ಜಿರುಣೇಶಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.