ADVERTISEMENT

ಅಲೆಮಾರಿ ಜನಾಂಗ ಸೌಲಭ್ಯಗಳಿಂದ ವಂಚಿತ: ಅಧಿಕಾರಿಗಳಿಗೆ ತರಾಟೆ

ಅಲೆಮಾರಿ ಸಮುದಾಯಗಳ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:28 IST
Last Updated 22 ನವೆಂಬರ್ 2025, 4:28 IST
ಬಾದಾಮಿ ಸಮೀಪದ ಶಿವಪುರ ಗ್ರಾಮದಲ್ಲಿ ರಾಜ್ಯ ಎಸ್.ಸಿ/ಎಸ್.ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಶುಕ್ರವಾರ ಕುಂದುಕೊರತೆ ಸಮಾರಂಭಕ್ಕೆ ಚಾಲನೆ ನೀಡಿದರು
ಬಾದಾಮಿ ಸಮೀಪದ ಶಿವಪುರ ಗ್ರಾಮದಲ್ಲಿ ರಾಜ್ಯ ಎಸ್.ಸಿ/ಎಸ್.ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಶುಕ್ರವಾರ ಕುಂದುಕೊರತೆ ಸಮಾರಂಭಕ್ಕೆ ಚಾಲನೆ ನೀಡಿದರು   

ಶಿವಪುರ (ಬಾದಾಮಿ ): ‘ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅನೇಕ ದಶಕಗಳು ಕಳೆದರೂ ಬುಡಕಟ್ಟು ಮತ್ತು ಅಲೆಮಾರಿ ಜನಾಂಗವು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣವಾಗಿದೆ ’ ಎಂದು ರಾಜ್ಯ ಎಸ್.ಸಿ/ಎಸ್.ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಅಲೆಮಾರಿ ಸಮುದಾಯದ ಕುಂದುಕೊರತೆ ಸಮಾರಂಭವನ್ನು ಅವರು ಉದ್ಘಾಟಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ಅಲೆಮಾರಿ ಜನಾಂಗದ ಸಮಸ್ಯೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಉತ್ತರ ಹೇಳಲು ತಡವರಿಸಿದರು. ಗ್ರಾಮದ ಜನಾಂಗಕ್ಕೆ ಸರ್ಕಾರದ ಯೋಜನೆಗಳನ್ನು ಏನನ್ನು ಕೊಟ್ಟಿರುವಿರಿ ಎಂದಾಗ ಅಧಿಕಾರಿಗಳು ಮೌನಕ್ಕೆ ಜಾರಿದರು.

ADVERTISEMENT

‘ಶಿವಪುರ ಗ್ರಾಮದ ಅಲೆಮಾರಿ ಜನಾಂಗವು ಶಿಕ್ಷಣ, ಉದ್ಯೋಗ, ಆರೋಗ್ಯದ ಸೌಲಭ್ಯಗಳು ಸಿಕ್ಕಿಲ್ಲ. ಶೌಚಾಲಯಗಳ ಕೊರತೆ ಸಮಸ್ಯೆಗಳನ್ನು ಹೊಂದಿದ್ದಾರೆ ಹೆಚ್ಚಿನ ಕಾಳಜೀ ವಹಿಸಬೇಕು ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಅಲೆಮಾರಿ ಮತ್ತು ಬುಡಕಟ್ಟು ಜನಾಂಗದವರ ನೈಜ ಪರಿಸ್ಥಿತಿ ಅರಿಯಲು ಭೇಟಿ ನೀಡಲಾಗಿದೆ. ನಿಮ್ಮ ಸಮಸ್ಯೆಗಳು ನಿವಾರಣೆಯಾಗುವವರೆಗೆ ಹೋರಾಟ ಮಾಡಿ ನಾವು ನಿಮ್ಮ ಜೊತೆಗೆ ಇದ್ದೇವೆ ’ ಎಂದು ನಿಗಮದ ಕಾರ್ಯದರ್ಶಿ ಕಿರಣ ಏಕಲವ್ಯ ತಿಳಿಸಿದರು.

ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದ ಅನೇಕ ಯೋಜನೆಗಳಿವೆ. ಗ್ರಾಮ ಸಭೆ ನಡೆಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ಮಳಿಮಠ ಹೇಳಿದರು.

ಕಂದಾಯ ಇಲಾಖೆಯ ಎಸ್.ಎಫ್. ಬೊಮ್ಮನ್ನವರ, ವಾಲ್ಮೀಕಿ ಸಮುದಾಯದ ಅಧ್ಯಕ್ಷ ಪ್ರಕಾಶ ನಾಯ್ಕರ್, ಬಸಪ್ಪ ಬಾಂಬೆ, ಶೇಕಪ್ಪ ಪೂಜಾರ, ಮಂಜುನಾಥ ಪೂಜಾರ, ಡಿ.ಡಿ. ಬಾಗಲಕೋಟ, ಶಿವಾನಂದ ಪೂಜಾರ , ಅಧಿಕಾರಿಗಳು ಮತ್ತು ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.