ADVERTISEMENT

ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 8:24 IST
Last Updated 28 ಜನವರಿ 2026, 8:24 IST
ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಅವರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡರು ಮನವಿ ಸಲ್ಲಿಸಿದರು
ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಅವರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡರು ಮನವಿ ಸಲ್ಲಿಸಿದರು   

ಬಾಗಲಕೋಟೆ: ‘ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ವೈದ್ಯಕೀಯ ಎಂಜಿನಿಯರಿಂಗ್‌, ನರ್ಸಿಂಗ್ ವ್ಯಾಸಂಗಕ್ಕಾಗಿ ಬಂದು ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ವಿದ್ಯಾರ್ಥಿಗಳ ಹೆಸರುಗಳನ್ನು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಮತದಾರರ ಯಾದಿಗೆ ಸೇರಿಸಲು ಅವಕಾಶ ನೀಡಬಾರದು’ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾತ್ಕಾಲಿಕ ವಾಸ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೂಲ ಮತಕ್ಷೇತ್ರದಲ್ಲಿಯೇ ಮತದಾರರಾಗಿ ನೋಂದಾಯಿತರಾಗಿರಬೇಕು ಎಂಬುದು ಚುನಾವಣಾ ಕಾನೂನುಗಳ ಮೂಲ ತತ್ವವಾಗಿದೆ. ಈ ನಿಯಮ ಉಲ್ಲಂಘಿಸಿ ಸ್ಥಳೀಯ ಮತದಾರರ ಯಾದಿಯಲ್ಲಿ ಹೆಸರು ಸೇರಿಸುವುದು ಕೇವಲ ಅಕ್ರಮವಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಪಾವಿತ್ರ್ಯ ಹಾಳುಮಾಡುವ ಗಂಭೀರ ಅಪರಾಧವಾಗಿದೆ ಎಂದು ದೂರಿದ್ದಾರೆ.

ಇಂತಹ ಕಾನೂನುಬಾಹಿರ ಹೆಸರು ಸೇರ್ಪಡೆಗಳ ಹಿಂದೆ ಸಂಘಟಿತ ಯತ್ನ, ರಾಜಕೀಯ ಒತ್ತಡ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯವಿರುವ ಶಂಕೆಯನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ. ಈ ಅಕ್ರಮವನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ADVERTISEMENT

‘ಈ ವಿಷಯದಲ್ಲಿ ಚುನಾವಣಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ವಸತಿ ನಿಲಯಗಳಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳ ಮತದಾರರ ನೋಂದಣಿ ಅರ್ಜಿಗಳನ್ನು ತಕ್ಷಣ ಮರುಪರಿಶೀಲಿಸಬೇಕು. ಶಾಶ್ವತ ವಾಸಸ್ಥಳಕ್ಕೆ ಸಂಬಂಧಿಸಿದ ದೃಢ ಮತ್ತು ಕಾನೂನುಬದ್ಧ ದಾಖಲೆಗಳಿಲ್ಲದ ಹೆಸರುಗಳನ್ನು ಮತದಾರರ ಯಾದಿಯಿಂದ ತಕ್ಷಣ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಕಾನೂನು ಬಾಹಿರವಾಗಿ ಹೆಸರು ಸೇರಿಸಿರುವ ಅಧಿಕಾರಿಗಳು, ಮಧ್ಯವರ್ತಿಗಳ ವಿರುದ್ಧ ಕಟ್ಟುನಿಟ್ಟಾದ ಕಾನೂನು ಮತ್ತು ಶಿಸ್ತು ಕ್ರಮಕೈಗೊಳ್ಳಬೇಕು. ಮತದಾರರ ಯಾದಿ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣವಾಗಿ ಮಾರ್ಗಸೂಚಿಗಳಂತೆ ಮಾತ್ರ ನಡೆಯುವಂತೆ ಸ್ಪಷ್ಟ ಹಾಗೂ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸ್ಪಷ್ಟ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಯ ಹಿತದೃಷ್ಟಿಯಿಂದ ಕಾನೂನುಬದ್ಧ, ಜನತಾಂತ್ರಿಕ ಹಾಗೂ ಸಾರ್ವಜನಿಕ ಹೋರಾಟದ ಮಾರ್ಗ ಅನುಸರಿಸಬೇಕಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ಜಿಲ್ಲಾ ಸಂಯೋಜಕ ಶ್ರೀಧರ ನೀಲನಾಯಕ, ಬ್ಲಾಕ್ ಅಧ್ಯಕ್ಷ ಸುನೀಲ ಬಾಲಗಾವಿ, ಪದಾಧಿಕಾರಿಗಳಾದ ವಿಜಯ ಮುಳ್ಳೂರ, ಪ್ರಭು ಹಳ್ಳೂರ, ಶಬಾಜಿ ಮಾಲಿನವನಿ, ಇಲಿಯಾಸ್ ಮದರಖಂಡಿ, ಬಂದೇನವಾಜ ಬದಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.