ADVERTISEMENT

ವೈದ್ಯರ ಮೇಲೆ ಹಲ್ಲೆ ಯತ್ನಕ್ಕೆ ಆಕ್ರೋಶ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ನಡೆಗೆ ಎಐಂಎ ಖಂಡನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 11:04 IST
Last Updated 8 ನವೆಂಬರ್ 2019, 11:04 IST
ಬಾಗಲಕೋಟೆಯಲ್ಲಿ ಶುಕ್ರವಾರ ಐಎಂಎ ನೇತೃತ್ವದಲ್ಲಿ ವೈದ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಅರ್ಪಿಸಿದರು
ಬಾಗಲಕೋಟೆಯಲ್ಲಿ ಶುಕ್ರವಾರ ಐಎಂಎ ನೇತೃತ್ವದಲ್ಲಿ ವೈದ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಅರ್ಪಿಸಿದರು   

ಬಾಗಲಕೋಟೆ: ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ಮಾಡುವ ಪ್ರಯತ್ನ ನಡೆಸಿರುವುದನ್ನು ಖಂಡಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಶಾಖೆಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್ ಮಾಡಲಾಗಿತ್ತು.

ಜಿಲ್ಲಾಧಿಕಾರಿಗೆ ಮನವಿ ಕೊಟ್ಟ ನಂತರ ಮಾತನಾಡಿದ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಕೆ.ಬಾವಿ, ’ವೈದ್ಯರು ಕನ್ನಡದಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಂದಲೆ ಮಾಡಿರುವುದನ್ನು ಸಂಘಟನೆ ಕಠಿಣ ಶಬ್ಧಗಳಿಂದ ಖಂಡಿಸಲಿದೆ’ ಎಂದರು.

ADVERTISEMENT

ಕಳೆದ 10 ವರ್ಷಗಳಲ್ಲಿ ವೈದ್ಯರ ಮೇಲಿನ ಹಿಂಸಾಚಾರ ಪ್ರಕರಣ ಹೆಚ್ಚಳಗೊಂಡಿವೆ. ಈ ರೀತಿ ಪದೇ ಪದೇ ಹಲ್ಲೆಗಳಾಗುತ್ತಿರುವ ಕಾರಣ ವೈದ್ಯರು ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನೇ ನಿಲ್ಲಿಸಿಬಿಡುವ ಅನಿವಾರ್ಯತೆ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಭಯದ ವಾತಾವರಣದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ. ಇಂತಹ ಘಟನೆಗಳಿಗೆ ಹೆದರಿ ಅತ್ಯುನ್ನತ ತಜ್ಞ ವೈದ್ಯರು ದೇಶ ತೊರೆದು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯಕೀಯ ಸೇವೆ ಸಲ್ಲಿಸುವಾಗ ವೈದ್ಯರ ಮೇಲೆ ಹಲ್ಲೆಯಾದರೆ, ಇಲ್ಲವೇ ಅವಾಚ್ಯವಾಗಿ ನಿಂದಿಸಿದರೆ ಮಾನಸಿಕ ಅಘಾತವಾಗುತ್ತದೆ. ಅವರು ನೀಡುವ ಚಿಕಿತ್ಸೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವೈದ್ಯಕೀಯ ಸೇವೆಯೂ ಹಾಳಾಗುವುದಲ್ಲದೇ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ತೊಂದರೆ ಎದುರಾಗುವ ಸಾಧ್ಯತೆಗಳೇ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ದೌರ್ಜನ್ಯ ಎಸಗುವವರನ್ನು ಕಠಿಣವಾಗಿ ಶಿಕ್ಷಿಸುವುದಲ್ಲದೇ, ಭಯವಿಲ್ಲದೇ ಮುಕ್ತ ವಾತಾವರಣದಲ್ಲಿ ವೃತ್ತಿ ನಡೆಸಲು ವೈದ್ಯರಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಘದ ಕಾರ್ಯದರ್ಶಿ ಡಾ.ಸಂಜಯ ಹೆರಂಜಲ್, ಡಾ.ಅರವಿಂದ ಪಟ್ಟಣಶೆಟ್ಟಿ, ಡಾ.ಶಿವಕುಮಾರ ಹಿರೇಮಠ, ಡಾ.ಸಿ.ಡಿ.ಕಲಬುರ್ಗಿ, ಡಾ.ಬಿ.ಎಸ್.ಮರೇಗುದ್ದಿ, ಡಾ.ಸಿ.ಎಸ್.ಬರಗಿ, ಡಾ.ಸಿ.ಕೆ.ಪಾಟೀಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.