ADVERTISEMENT

ಪಂಚಮಸಾಲಿ ಪೀಠಕ್ಕೆ ಶಾಸಕ ವಿಜಯಾನಂದ ಕೊಡುಗೆ ಏನು?

ಆಸ್ಪತ್ರೆಯಲ್ಲಿ ಸ್ವಾಮೀಜಿ ಭೇಟಿ: ಶಾಸಕ ಸಿ.ಸಿ.ಪಾಟೀಲ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 21:16 IST
Last Updated 20 ಜುಲೈ 2025, 21:16 IST
ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಭಾನುವಾರ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಶಾಸಕ ಸಿ.ಸಿ. ಪಾಟೀಲ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು
ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಭಾನುವಾರ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಶಾಸಕ ಸಿ.ಸಿ. ಪಾಟೀಲ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು   

ಬಾಗಲಕೋಟೆ: ‘ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಪೀಠ ಕಟ್ಟಲು ಹಣ ಕೊಟ್ಟವರು ಮುರುಗೇಶ ನಿರಾಣಿ. ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಸಮಾಜ, ಪೀಠಕ್ಕೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಕೊಡುಗೆ ಏನು?’ ಎಂದು ಶಾಸಕ ಸಿ.ಸಿ.ಪಾಟೀಲ ಪ್ರಶ್ನಿಸಿದರು.

ನಗರದ ಕೆರೂಡಿ ಆಸ್ಪತ್ರೆಯಲ್ಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಗ್ಯ ವಿಚಾರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಾದಯಾತ್ರೆಗೆ, ಪತ್ನಿಗೆ ಟಿಕೆಟ್ ಬೇಕಾದಾಗ ಸ್ವಾಮೀಜಿ ಬೇಕಾಗಿದ್ದರು. ಸ್ವಾಮೀಜಿಯನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಎಲ್ಲವನ್ನೂ ಸಮಾಜ ನೋಡುತ್ತಿದೆ’ ಎಂದರು.

ADVERTISEMENT

‘ಮಠಕ್ಕೆ ಕೀಲಿ ಹಾಕಿ. ಕಾವಲಿಗೆ ಬೇರೆ ಸಮಾಜದವರನ್ನು ನೇಮಿಸಿ. ಬಂದವರ ಫೋಟೊ ತೆಗೆಯುವುದು ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸ್ವಾಮೀಜಿ ಹಣಕ್ಕಾಗಿ ಆಸೆಪಟ್ಟವರಲ್ಲ. ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲ. ಯಾವುದೇ ಊರಿಗೆ ಹೋದರೆ ಭಕ್ತರ ಮನೆಯಲ್ಲಿರುತ್ತಾರೆ. ಅವರು ನಮ್ಮ ಸರ್ಕಾರದ ವಿರುದ್ಧವೇ ಹೋರಾಟ ಮಾಡಿದ್ದರು. ಹೋರಾಟಕ್ಕೆ ನಾವೂ ಬೆಂಬಲ ಕೊಟ್ಟಿದ್ದೆವು’ ಎಂದು ನೆನಪಿಸಿಕೊಂಡರು. 

‘ನಮ್ಮ ಆಸ್ತಿ ಕಾಶಪ್ಪನವರ ತೆಗೆದುಕೊಂಡಿಲ್ಲ. ನಾನು ಅವರ ಆಸ್ತಿ ತೆಗೆದುಕೊಂಡಿಲ್ಲ. ಅವರ ಅಜೆಂಡಾ ಬೇರೆ ಇದೆ. ಭಿನ್ನಾಭಿಪ್ರಾಯವಿದ್ದರೆ ಚರ್ಚಿಸಿ, ಬಗೆಹರಿಸಿಕೊಳ್ಳೋಣ’ ಎಂದರು.

ಸ್ವಾಮೀಜಿ ಡಿಸ್‌ಚಾರ್ಜ್: ಚಿಕಿತ್ಸೆ ಬಳಿಕ ಸ್ವಾಮೀಜಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಆದರು. ‘ನೇರವಾಗಿ ಪೀಠಕ್ಕೆ ಹೋಗುತ್ತಿದ್ದೇನೆ. ಇನ್ನೂ ಎರಡು ದಿನ ಅಲ್ಲಿಯೇ ಇರುತ್ತೇನೆ. ಭಕ್ತರು ಆತಂಕಕ್ಕೆ ಒಳಗಾಗಬಾರದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.