ADVERTISEMENT

ಹಂದಿ ಸೆರೆ ಕಾರ್ಯಕ್ಕೆ ಪುನಃ ಚಾಲನೆ

ನಗರಸಭೆ ವ್ಯಾಪ್ತಿಯಲ್ಲಿ  4500 ಹಂದಿಗಳ ಸ್ಥಳಾಂತರಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 14:20 IST
Last Updated 30 ಆಗಸ್ಟ್ 2018, 14:20 IST
ಬಾಗಲಕೋಟೆಯ ನವನಗರದ ಜಿಲ್ಲಾ ನ್ಯಾಯಾಲಯದ ಬಳಿ ಗುರುವಾರ ಹಂದಿ ಹಿಡಿಯಲಾಯಿತು
ಬಾಗಲಕೋಟೆಯ ನವನಗರದ ಜಿಲ್ಲಾ ನ್ಯಾಯಾಲಯದ ಬಳಿ ಗುರುವಾರ ಹಂದಿ ಹಿಡಿಯಲಾಯಿತು   

ಬಾಗಲಕೋಟೆ: ನಗರದಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆಯನ್ನು ನಗರಸಭೆಪುನಃ ಆರಂಭಿಸಿದೆ. ಈ ಬಾರಿ 2000 ಹಂದಿಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.

ತಮಿಳುನಾಡಿನಿಂದ ಹಂದಿ ಹಿಡಿಯುವವರ ಎರಡು ತಂಡಗಳು ಬಂದಿದ್ದು, ಮಂಗಳವಾರದಿಂದ ಕೆಲಸ ಆರಂಭಿಸಿದ್ದಾರೆ.ಹಳೇ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರದ ಹಂದಿ ಹಿಡಿಯಲಾಗುತ್ತಿದೆ.

‘ಒಂದು ಲಾರಿಯಲ್ಲಿ ಅಂದಾಜು 300 ರಿಂದ 400 ಹಂದಿಗಳನ್ನು ಸಾಗಿಸಬಹುದಾಗಿದ್ದು, ಹಿಡಿದ ಹಂದಿಗಳನ್ನು ಸಾಗಣೆ ಮಾಡಲುತಮಿಳುನಾಡಿನಿಂದ ನಾಲ್ಕು ಲಾರಿಗಳು ಬಂದಿವೆ’ ಎಂದು ನಗರಸಭೆ ಪರಿಸರ ಅಧಿಕಾರಿ ಹಣಮಂತ ಕಲಾದಗಿ ಹೇಳುತ್ತಾರೆ.

ADVERTISEMENT

‘ಹಂದಿ ಮಾಲೀಕರು ಅವುಗಳನ್ನು ದೂರಕ್ಕೆ ಸ್ಥಳಾಂತರಿಸುವವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ. ಶುಕ್ರವಾರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಸೆರೆ ಹಿಡಿದ ಹಂದಿಗಳನ್ನು ಗುರುವಾರದಿಂದಲೇ ತಮಿಳುನಾಡಿಗೆ ಕಳುಹಿಸುವ ಕೆಲಸ ಆರಂಭಿಸಿರುವುದಾಗಿ’ ಕಲಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಿಂಗಳ ಹಿಂದೆ ನಗರದಲ್ಲಿ ಹಂದಿಗಳು ದಾಳಿ ನಡೆಸಿ ಚಿಕ್ಕ ಮಗುವನ್ನು ಗಾಯಗೊಳಿಸಿದ್ದವು. ಜೊತೆಗೆ ಹಂದಿ ಹಾವಳಿ ತೀವ್ರವಾಗಿರುವ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಹೆಚ್ಚಿದ್ದವು. ಕಳೆದ ಜೂನ್‌ನಲ್ಲಿ ತಿಂಗಳಲ್ಲಿ ಹಂದಿ ಹಿಡಿಯುವ ತಂಡಗಳನ್ನು ಕರೆಯಿಸಿ 2500 ಹಂದಿಗಳನ್ನು ತಮಿಳುನಾಡಿಗೆ ಕಳುಹಿಸಲಾಗಿತ್ತು.

‘ನಗರಸಭೆ ಹಂದಿಗಳನ್ನು ಸ್ಥಳಾಂತರಿಸುವುದು ಉತ್ತಮ ವಿಚಾರ. ಆದರೆ ಹಂದಿ ಹಿಡಿಯುವ ತಂಡಗಳು ಒಮ್ಮೆ ಬಂದು ಹೋದರೆ ಮರಳಿ ಬರಲು ದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಅದರ ಬದಲಿಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಬೇಕು’ ಎಂದು ನಗರದ ನಿವಾಸಿ ದುರ್ಗೇಶ ಚೋಳಚಗುಡ್ಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.