
ಮುಧೋಳ: 2024ರಲ್ಲಿ ನಡೆದ ಹಂದಿಗಳ ಕಳವು ಪ್ರಕರಣದ ಮೂವರು ಆರೋಪಿಗಳನ್ನು ಒಂದೂವರೆ ವರ್ಷದ ನಂತರ ಬಂಧಿಸಿ ಅವರಿಂದ ₹ 5 ಲಕ್ಷ ನಗದು, ₹ 8 ಲಕ್ಷ ಮೌಲ್ಯದ ಪಿಕಪ್ ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಬಾಗಲಕೋಟೆ ಎಸ್‍ಪಿ ಸಿದ್ಧಾರ್ಥ ಗೋಯಲ್ ಹೇಳಿದರು.
ಮಂಗಳವಾರ ನಗರದ ಸಿಪಿಐ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಮುಗಳಖೋಡ ಗ್ರಾಮದ ಯಮನಪ್ಪ ಭಜಂತ್ರಿ ಅವರಿಗೆ ಸೇರಿದ ₹ 10.50 ಲಕ್ಷ ಮೌಲ್ಯದ 70 ಸಾಕು ಹಂದಿಗಳು ಕಳವಾಗಿರುವ ಬಗ್ಗೆ 2024ರ ಜೂನ್ 1ರಂದು ಮುಧೋಳ ಠಾಣೆಯಲ್ಲಿ ದೂರು ದಾಖಲಾಗಿತ್ತು’ ಎಂದು ತಿಳಿಸಿದರು.
ಈ ಪ್ರಕರಣ ಬೇಧಿಸಲು ಡಿಎಸ್‍ಪಿ ಎಸ್. ರೋಶನ್ ಜಮೀರ್, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‍ಐಗಳಾದ ಅಜೀತಕುಮಾರ ಹೊಸಮನಿ, ಪ್ರಕಾಶ ಮುರನಾಳ, ಸಿಬ್ಬಂದಿ ಆರ್.ಬಿ.ಕಟಗೇರಿ, ಬಿ.ಡಿ.ಕುರಿ, ಎಚ್.ಜಿ.ಮಾದರ, ಎಂ.ಬಿ.ದಳವಾಯಿ, ಎಸ್.ಎಂ.ಭದ್ರಶೆಟ್ಟಿ, ಶ್ರೀಕಾಂತ ಬೆನಕಟ್ಟಿ, ಎಂಎಲ್.ವಡೆಯರ, ಬಿ.ಆರ್.ಜಗಲಿ, ಸಿ.ಎಂ.ಜಟ್ಟೆಪ್ಪಗೋಳ ಭಾಗವಹಿಸಿದ್ದರು.
ಆರೋಪಿಗಳಾದ ಸಿಂಧನೂರಿನ ಸಂತೋಷಕುಮಾರ ಕಾಮಣ್ಣ, ಸಿಂಧನೂರ ತಾಲ್ಲೂಕು ದೇವರ ಗುಡಿಯ ಶಿವರಾಜ ಕರಿಯಪ್ಪ ಲೋಣಿ ಹಾಗೂ ಗಂಗಾವತಿ ತಾಲ್ಲೂಕು ನಾಗನಕಲ್ ಗ್ರಾಮದ ಮಾರುತಿ ಯಲ್ಲಪ್ಪ ಕೊರವರ ಅವರನ್ನು ಬಂಧಿಸಲಾಗಿದೆ. ಈ ಮೊದಲು ಇನ್ನೊಬ್ಬ ಆರೋಪಿ ಪರಶುರಾಮ ಭಜಂತ್ರಿಯನ್ನು ಬಂಧಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಕಟ್ಟು ನಿಟ್ಟಿನ ಸಂಚಾರ ನಿಯಮಗಳಿಂದಾಗಿ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಜನರು ಸ್ವಯಂ ಪ್ರೇರಣೆಯಿಂದ ಹೆಲ್ಮೇಟ್ ಧಾರಣೆ, ಸೀಟ್ ಬೆಲ್ಟ್ ಅನ್ನು ಧರಿಸಿದರೆ ಅಪಘಾತದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ’ ಎಂದು ಹೇಳಿದರು.
ಹೊಸ ವರ್ಷದ ಆಚರಣೆ ಶಾಂತಿಯುತವಾಗಿರಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮದ್ಯಕುಡಿದು ವಾಹನ ಚಲಾಯಿಸುವುವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಸ್.ಪಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್‍ಪಿ ಎಸ್.ರೋಶನಜಮೀರ್, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‍ಐಗಳಾದ ಅಜೀತಕುಮಾರ ಹೊಸಮನಿ, ಪ್ರಕಾಶ ಮುರನಾಳ ಇದ್ದರು.
ಆಭರಣ ಅಂಗಡಿಗಳಲ್ಲಿ ಜಾಗೃತಿ ಕಾರ್ಯಕ್ರಮ
ಜಿಲ್ಲೆಯಲ್ಲಿ 397 ಬಂಗಾರದ ಆಭರಣಗಳ ಅಂಗಡಿಗಳು ಇದ್ದು ಪ್ರತಿ ಅಂಗಡಿಗಳಿಗೆ ಭೇಟಿ ನೀಡಿ ಸುರಕ್ಷತೆಯ ಅರಿವು ಮೂಡಸಲಾಗುತ್ತಿದೆ. ಈಗಾಗಲೇ 206 ಅಂಗಡಿಗಳಿಗೆ ಭೇಟಿ ನೀಡಲಾಗಿದ್ದು ಇನ್ನೆರಡು ದಿನದಲ್ಲಿ ಎಲ್ಲ ಅಂಗಡಿಗಳಿಗೆ ಭೇಟಿ ನೀಡಲಾಗುವುದು. ಬಂಗಾರದ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಯಾವ ರೀತಿ ಅಳವಡಿಸಬೇಕು? ಒಂದೇ ಬೀದಿಯಲ್ಲಿ 4 ಅಂಗಡಿಗಳು ಇದ್ದರೆ ಎಲ್ಲರೂ ಸೇರಿ ಕಾವಲುಗಾರರನ್ನು ಗೊತ್ತುಪಡಿಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಬಾಗಲಕೋಟೆ ಎಸ್‍ಪಿ ಸಿದ್ಧಾರ್ಥ ಗೋಯಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.