ಹುನಗುಂದ: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದರ ಕುಸಿಯುತ್ತಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ತೊಗರಿ ಬೆಳೆಗಾರರು ಕಂಗಲಾಗಿದ್ದಾರೆ.
ಪಟ್ಟಣದ ಮಾರುಕಟ್ಟೆಯಲ್ಲಿ ವಾರದ ಹಿಂದೆ ಒಂದು ಕ್ವಿಂಟಲ್ ತೊಗರಿಗೆ ₹9,500 ರಿಂದ ₹10,200ರವರೆಗೆ ಧಾರಣೆ ಇತ್ತು. ಕಳೆದ ಮೂರ್ನಾಲ್ಕು ದಿನಗಳಲ್ಲಿ ₹8,000 ಅಸುಪಾಸಿನಲ್ಲಿ ಮಾರಾಟ ಆಗುತ್ತಿದೆ. ಹೀಗಾಗಿ ಕಳೆದ 8-10 ದಿನಗಳಲ್ಲಿ ₹1,500 ರಿಂದ 2,000ರವರೆಗೆ ಕುಸಿತ ಕಂಡಿದೆ.
ಇದೇ ಮೊದಲ ಬಾರಿಗೆ ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಅಂದಾಜು 34.321ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಹವಾಮಾನ ವೈಪರೀತ್ಯ ಜೊತೆಗೆ ಕಳಪೆ ಬೀಜ, ಕಾರ್ಮಿಕರ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳ ನಡುವೆ ಸಾವಿರಾರೂ ರೂಪಾಯಿ ಖರ್ಚು ತೊಗರಿ ಮಾರಾಟ ಮಾಡಲು ಸಜ್ಜಾಗಿರುವಾಗ ತೊಗರಿ ದರ ಕುಸಿದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೆರೆಯ ಜಿಲ್ಲೆ ವಿಜಯಪುರದಲ್ಲಿ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬೆಳೆಯ ಕ್ಷೇತ್ರ ಹೊಂದಿದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯ ಜೊತಗೆ ಕಳಪೆ ಬೀಜದಿಂದ ತೊಗರಿ ಇಳುವರಿ ಕುಂಠಿತಗೊಂಡು ಬೆಳೆ ನೆಲೆಕಚ್ಚಿದೆ. ಆದರೂ ಇಂತಹ ಸಮಯದಲ್ಲಿ ತೊಗರಿ ಬೆಳೆಗೆ ಉತ್ತಮ ದರ ಇರಬೇಕಾಗಿತ್ತು. ಹಾಗಾಗಿಲ್ಲ. ಆದರೆ ಕಳೆದ ಸೋಮವಾರ ಒಂದೇ ದಿನ ಕ್ವಿಂಟಲ್ ತೊಗರಿಗೆ ₹1,000 ರಿಂದ ₹1,500ರವರೆಗೆ ಕುಸಿತ ಕಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಖರೀದಿರಾದರು ಎಲ್ಲಿ ಕೃತಕ ಅಭಾವ ಸೃಷ್ಟಿದರೆ ಎಂಬ ಅನುಮಾನ ರೈತರನ್ನು ಕಾಡುತ್ತಿದೆ.
ಬೇರೆ ರಾಜ್ಯಗಳಲ್ಲಿ ತೊಗರಿಗೆ ಕಡಿಮೆ ದರವಿರುವುದರಿಂದ ಸೊಲ್ಲಾಪುರ ಮತ್ತು ಇತರೆ ಕಡೆಗಳಿಂದ ಬರುವ ಖರೀದಿದಾರರು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಸರ್ಕಾರಕ್ಕೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಆರ್ ಎಂ. ದಂಡಿನ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಹುನಗುಂದ
‘ಒಂದು ತಿಂಗಳಿಂದ ಕ್ವಿಂಟಲ್ ತೊಗರಿಗೆ ₹9,000ಕ್ಕಿಂತ ಹೆಚ್ಚಿನ ದರವಿತ್ತು. ಈಗ ದಿಢೀರನೆ ದರ ಕುಸಿದಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಧಾವಿಸಿ ಉತ್ತಮ ಬೆಲೆ ನಿಗದಿ ಪಡಿಸಬೇಕು’ ಎಂದು ಚಿತ್ತವಾಡಗಿ ಗ್ರಾಮದ ಮಹಾಂತೇಶ ಗುಡದಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ಬಾರಿ ಬರಗಾಲದಿಂದ ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ರೈತ ಸಮುದಾಯ ಸಂಕಷ್ಟದಲ್ಲಿದೆ. ಈ ಬಾರಿ ಉತ್ತಮ ಮಳೆ ಆಗಿದ್ದರಿಂದ ಉತ್ತಮ ಬೆಳೆ ಮತ್ತು ಉತ್ತಮ ದರ ದೊರೆಯಬಹುದು. ನಿರೀಕ್ಷೆಯಲ್ಲಿದ್ದ ರೈತರಿಗೆ ತೊಗರಿ ದರ ಕುಸಿತಗೊಂಡಿರುವುದು ನಿರಾಸೆ ಮೂಡಿಸಿದೆ ಎಂದು ಹಿರೇಬಾದವಾಡಗಿ ಗ್ರಾಮದ ರೈತ ಮಹಾಂತೇಶ ಪರೂತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.