ADVERTISEMENT

ಬಾಗಲಕೋಟೆ | ಪೊಲೀಸರ ಸೇವೆ, ತ್ಯಾಗ ಅನನ್ಯ: ಜಿಲ್ಲಾಧಿಕಾರಿ ಸಂಗಪ್ಪ ಹೇಳಿಕೆ

ಪೊಲೀಸ್‌ ಹುತಾತ್ಮರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 5:54 IST
Last Updated 22 ಅಕ್ಟೋಬರ್ 2025, 5:54 IST
ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಅರ್ಪಿಸಿದರು 
ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಅರ್ಪಿಸಿದರು    

ಬಾಗಲಕೋಟೆ: ‘ನಾಡಿನ ಭದ್ರತೆಗಾಗಿ ದೇಶದ ಗಡಿ ಕಾಯುವ ಸೈನಿಕರಂತೆ, ಸಮಾಜದ ಶಾಂತಿ–ಸುವ್ಯವಸ್ಥೆ ಕಾಪಾಡುವ ಪೊಲೀಸರ ಸೇವೆ ಮತ್ತು ತ್ಯಾಗ ಅನನ್ಯವಾದುದು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಇಲ್ಲಿನ ನವನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿ ಮಾತನಾಡಿದರು.

‘ತ್ಯಾಗ, ಧೈರ್ಯ ಮತ್ತು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಿದ, ದೇಶದ ಭದ್ರತೆಗಾಗಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸುವ ದಿನ ಇದಾಗಿದೆ’ ಎಂದರು.

ADVERTISEMENT

‘ದೇಶದ ರಕ್ಷಣೆಗಾಗಿ ಪ್ರಾಣ ತೆತ್ತ ಯೋಧ, ಪೋಲಿಸರ ತ್ಯಾಗವನ್ನು ಸಮಾಜ ಹಾಗೂ ಕುಟುಂಬದ ಸದಸ್ಯರು ನೆನಪಿಸಿಕೊಳ್ಳಬೇಕು. ಹುತಾತ್ಮರ ತ್ಯಾಗದಿಂದಾಗಿ ನಾವೆಲ್ಲರೂ ಶಾಂತಿಯಿಂದ ಬದುಕುತ್ತಿದ್ದೇವೆ. ಪ್ರಜಾಪ್ರಭುತ್ವ ಸರಾಗವಾಗಿ ನಡೆದಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ‘ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದೇಶದ 191 ಮಂದಿ ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. ಅವರೆಲ್ಲರಿಗೂ ಗೌರವ ಸಲ್ಲಿಸಲಾಗುತ್ತಿದೆ’ ಎಂದರು.

ಹುತಾತ್ಮರಾದ ಪೊಲೀಸ್ ಕುಟುಂಬದ ಸದಸ್ಯರು, ರೈತರು, ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಇದ್ದರು.

ಹುತಾತ್ಮರ ಸೇವೆ, ತ್ಯಾಗ ಸ್ಮರಣೆ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ನಮನ ಹುತಾತ್ಮ ಪೊಲೀಸ್ ಕುಟುಂಬದವರು ಭಾಗಿ

ತಮ್ಮ ಜೀವ ಕಳೆದುಕೊಂಡು ನಮ್ಮೆಲ್ಲರ ಜೀವನ ರಕ್ಷಣೆ ಮಾಡಿದ್ದ ಹುತಾತ್ಮರ ಧೈರ್ಯ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ
ಸಂಗಪ್ಪ ಜಿಲ್ಲಾಧಿಕಾರಿ

‘ಕಾನೂನು ಪಾಲನೆಯಿಂದ ನೆಮ್ಮದಿ’

‘ಸೈನಿಕರು ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತಾರೆ. ಪೊಲೀಸರು ಬೀದಿಗಳಲ್ಲಿ ನಿಂತು ಜನರ ರಕ್ಷಣೆ ಮಾಡುತ್ತಾರೆ. ಆಯುಧಗಳಿದ್ದರೆ ಸಾಲದು ಧೈರ್ಯವೂ ಇರಬೇಕು. ಪೊಲೀಸ್ ವೇಷದೊಳಗೂ ಒಂದು ಹೃದಯವಿದೆ. ಆದರೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕಠಿಣವಾಗಿ ವರ್ತಿಸಬೇಕಾಗುತ್ತದೆ. ಆಗಲೇ ಕಾನೂನು ಪಾಲನೆಯಾಗಿ ಎಲ್ಲರೂ ನೆಮ್ಮದಿಯಿಂದ ಇರಬಹುದು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.