ADVERTISEMENT

ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧ: ಜಯಮೃತ್ಯುಂಜಯ ಸ್ವಾಮೀಜಿ

ಪ್ರವರ್ಗ 2ಎಗೆ ಪಂಚಮಸಾಲಿ ಸಮುದಾಯ ಸೇರಿಸಿ: ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 8:53 IST
Last Updated 19 ಅಕ್ಟೋಬರ್ 2020, 8:53 IST
ಬಸವ ಜಯಮೃತ್ಯುಂಜಯ ಶ್ರೀ
ಬಸವ ಜಯಮೃತ್ಯುಂಜಯ ಶ್ರೀ   

ಬಾಗಲಕೋಟೆ: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಕಾರ್ಯದಲ್ಲಿ ಪಂಚಮಸಾಲಿ ಸಮಾಜದ ಪಾತ್ರ ದೊಡ್ಡದಿದೆ. ಸಮುದಾಯದ ಶೇ 70ರಷ್ಟು ಮಂದಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ತಮ್ಮ ಅವಧಿಯಲ್ಲಿಯೇ ಯಡಿಯೂರಪ್ಪ ಸಮಾಜದ ಋಣ ತೀರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜ ಸೇರಿದಂತೆ ಲಿಂಗಾಯತ ಸಮುದಾಯದ 42 ಉಪ ಪಂಗಡಗಳನ್ನು 2ಎಗೆ ಪ್ರವರ್ಗಕ್ಕೆ ಸೇರಿಸುವ ಬೇಡಿಕೆಗೆ 2012ರಲ್ಲಿ ಆಗಿನ ಸರ್ಕಾರ ಸ್ಪಂದಿಸಿತ್ತು. ಆಗ ಸಚಿವ ಸಿ.ಎಂ.ಉದಾಸಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ವರದಿ ನೀಡಿದ್ದರೂ ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರ ಕೂಡಲೇ ಸಿ.ಎಂ.ಉದಾಸಿ ಸಮಿತಿ ವರದಿಯನ್ನು ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ADVERTISEMENT

ಈಗ ಪ್ರವರ್ಗ 2ಎನಲ್ಲಿರುವ ದೊಡ್ಡ ಸಮುದಾಯ ಹಾಲುಮತ ಸಮಾಜದವರು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಇಟ್ಟಿದ್ದಾರೆ. ವಾಲ್ಮೀಕಿ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳಗೊಳಿಸಿ ಹಾಲುಮತ ಸಮಾಜದವರ ಆಶಯವನ್ನು ಈಡೇರಿಸಲಿ ಎಂದು ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಪ್ರವರ್ಗ 2ಎನಲ್ಲಿರುವ ಮೀಸಲಾತಿ ಪ್ರಮಾಣ ಈಗ ಶೇ 15ರಷ್ಟು ಇದ್ದು, ಅದನ್ನು ಹೆಚ್ಚಳಗೊಳಿಸುವಂತೆಯೂ ಶ್ರೀಗಳು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದವರು ಸೌಮ್ಯ ಸ್ವಭಾವದವರು ಎಂಬ ಕಾರಣಕ್ಕೆ ಈ ಹಿಂದೆ ಬಂದ ಎಲ್ಲ ಸರ್ಕಾರಗಳು ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ನಾವು ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು ಹೋರಾಟ ಮಾಡಿಯಾದರೂ ಸರಿ ನಮ್ಮ ಹಕ್ಕು ಪಡೆಯಲಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.