ಬಾಗಲಕೋಟೆ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ಕೌಶಲ ಮತ್ತು ಗುಣಮಟ್ಟದ ಬೋಧನೆ ದೊರೆಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ.ಪ್ರಕಾಶ ಹೊಸಮನಿ ಹೇಳಿದರು.
ಇಲ್ಲಿನ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶನಿವಾರ ಭೇಟಿ ನೀಡಿ, ಬೋಧಕರೊಂದಿಗೆ ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಬೋಧನೆ ಕುರಿತು ಚರ್ಚಿಸಿದರು.
ವಿದ್ಯಾರ್ಥಿಗಳ ಕಲಿಕಾ ಮಟ್ಟವು ಉನ್ನತ ಶ್ರೇಣಿಯಲ್ಲಿರಬೇಕು. ಅವರು ಸಮಾಜದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು ಎಂದರು.
ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಕಾಲೇಜಿನ ಸರ್ವ ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮವಿದೆ ಎಂದು ತಿಳಿಸಿದರು.
ಕಾಲೇಜಿನ ಪರವಾಗಿ ಜಂಟಿ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಅಜೀತ್ ನಾಗರಾಳೆ, ಜಿ.ಜಿ. ಹಿರೇಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.