ADVERTISEMENT

ಗುಳೇದಗುಡ್ಡ | ಅಧಿಕಾರಿ ಕಾರು ತಡೆದು ಪ್ರತಿಭಟನೆ

ಪರ್ವತಿ: ಜೆಜೆಎಂ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:11 IST
Last Updated 16 ಏಪ್ರಿಲ್ 2025, 16:11 IST
ಗುಳೇದಗುಡ್ಡದ ಪರ್ವತಿ ಗ್ರಾಮದಲ್ಲಿ ಜೆಜೆಎಂ ಅಧಿಕಾರಿ ಕಾರು ತಡೆದು ಪ್ರತಿಭಟನೆ ಮಾಡಲಾಯಿತು
ಗುಳೇದಗುಡ್ಡದ ಪರ್ವತಿ ಗ್ರಾಮದಲ್ಲಿ ಜೆಜೆಎಂ ಅಧಿಕಾರಿ ಕಾರು ತಡೆದು ಪ್ರತಿಭಟನೆ ಮಾಡಲಾಯಿತು   

ಗುಳೇದಗುಡ್ಡ: ತಾಲ್ಲೂಕಿನ ಪರ್ವತಿ ಗ್ರಾಮದಲ್ಲಿ ಮನೆಮನೆಗೆ ಶುದ್ಧ ಕುಡಿಯುವ ನೀರಿನ ಕಾಮಗಾರಿ ಜಲಜೀವನ್ ಮಷಿನ್, ಕಾಮಗಾರಿ ಅರ್ಧಕ್ಕೆ ನಿಂತಿದ್ದು ಪರಿಶೀಲನೆಗೆ ಬುಧವಾರ ಬಂದ ಬೆಂಗಳೂರಿನ ನೀರು ಸರಬರಾಜು ಸ್ಟೇಟ್ ಕ್ವಾಲಿಟಿ ಅಧಿಕಾರಿ ಎಸ್.ಎಲ್.ಮೇಟಿ ಅವರ ಕಾರನ್ನು ಕಲ್ಲುಗಳಿಂದ ಅಡ್ಡಗಟ್ಟಿ ಒಂದು ತಾಸಿಗೂ ಹೆಚ್ಚು ಹೊತ್ತು  ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪರ್ವತಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಆರಂಭವಾದರೂ ಪೂರ್ಣ ಪ್ರಮಾಣದಲ್ಲಿ ಎಲ್ಲ ಮನೆಗಳಿಗೂ ನಲ್ಲಿ ಜೋಡಿಸಿಲ್ಲ. ಈಚೆಗೆ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಕಾಮಗಾರಿ ಕಳಪೆ ಆಗಿದ್ದರಿಂದ ಪೂರ್ಣಗೊಳ್ಳುವ ಮುನ್ನವೆ ಪೈಪ್‌ಗಳು ಒಡೆದಿವೆ ಮತ್ತು ವಾಲ್‌ಗಳು ಕೊಳಚೆ ನೀರಿನಲ್ಲಿ ಜೋಡಿಸಿದ್ದರಿಂದ ನೀರು ವಾಸನೆ ಬರುತ್ತಿವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ವೈ.ಎಲ್.ತೂಗುಣಸಿ ಹಾಗೂ ಸಂಗಪ್ಪ ಆಸಂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೆಂಕವ್ವ ಗಾಜಿ ಮಾತನಾಡಿ, ‘ಈಗಾಗಲೇ ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕಾಮಗಾರಿಗೆ ತೆಗೆದಿಟ್ಟ ಹಣ ಮುಗಿಸಿದ್ದು ಈಗ ನಿರ್ವಹಣೆ ವೆಚ್ಚವೆಂದು ಲಕ್ಷಗಟ್ಟಲೆ ಹಣ ತೆಗೆದು ಪೋಲು ಮಾಡಿದ್ದಾರೆ’ ಎಂದು  ದೂರಿದರು.

ADVERTISEMENT

‘ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡಿಲ್ಲ. ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.

ಪೊಲೀಸರು ಬರುವವರೆಗೆ ತಾಸುಗಟ್ಟಲೇ ಅಧಿಕಾರಿ ಕಾರು ತಡೆದು ಪ್ರತಿಭಟಿಸಿದ ಗ್ರಾಮಸ್ಥರು ಅಧಿಕಾರಿಗೆ ಬಿಸಿ ಮುಟ್ಟಿಸಿದರು. ನಂತರ ಪೊಲೀಸರು ಬಂದು ಅಧಿಕಾರಿಗಳು ನಿರ್ಗಮಿಸಲು ಅನುವು ಮಾಡಿಕೊಟ್ಟರು. ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು. ಹೆಚ್ಚು ಜನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನೀರಿನ ಶುದ್ಧತೆ ಪರೀಶೀಲಿಸಲು ಬಂದರೆ ಕಾರು ಅಡ್ಡಗಟ್ಟಿ ತಾಸುಗಟ್ಟಲೇ ನಿಲ್ಲಿಸಿ ಪ್ರತಿಭಟಿಸುವುದು ಸರಿಯಾದ ಕ್ರಮವಲ್ಲ ಎಂದು ನೀರು ಸರಬರಾಜು ಸ್ಟೇಟ್ ಕ್ವಾಲಿಟಿ ಅಧಿಕಾರಿ ಎಸ್.ಎಲ್.ಮೇಟಿ ತಿಳಿಸಿದರು.

ಪರ್ವತಿ ಗ್ರಾಮದಲ್ಲಿ ಜೆಜೆಎಮ್ ಅಧಿಕಾರಿಯ ಕಾರು ತಡೆದು ಪ್ರತಿಭಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.