ಬಾಗಲಕೋಟೆ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆಗೆ ತಡೆ ವಿರೋಧಿಸಿ ಎಚ್. ಶಿರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶನಿವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಿದರು.
ರಾಜ್ಯದ ನೆಲ, ಜಲ, ವಿದ್ಯುತ್ ಬಳಸಿಕೊಂಡು ಬೃಹತ್ ಉದ್ಯಮಗಳನ್ನು ಆರಂಭಿಸುವ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಾರೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದಿರುವುದು ಸರಿಯಲ್ಲ ಎಂದು ದೂರಿದರು.
ಉದ್ಯಮಿಗಳ ವಿರೋಧದ ಕಾರಣ ಮೀಸಲಾತಿ ಮಸೂದೆ ತರುವುದನ್ನು ಮುಂದೂಡಿರುವುದು ಸರಿಯಲ್ಲ. ಇದರಿಂದ ಕನ್ನಡಿಗರಿಗೆ ತೀವ್ರ ಅನ್ಯಾಯವಾಗಲಿದೆ. ಕೂಡಲೇ ಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಯಿಸಿದರು.
ರಾಜ್ಯ ವಕ್ತಾರ ಬಿ.ಎಂ. ಪಾಟೀಲ ಮಾತನಾಡಿ, ‘ರಾಜ್ಯದಲ್ಲಿರುವ ಕೈಗಾರಿಕೆಗಳು ಹಾಗೂ ಉದ್ಯಮಗಳಲ್ಲಿ ಶೇ 80ರಷ್ಟು ಕಾರ್ಮಿಕರು ಅನ್ಯ ರಾಜ್ಯದವರೇ ಆಗಿದ್ದಾರೆ. ಕನ್ನಡಿಗರಿಗೆ ಪ್ರತಿ ಹಂತದಲ್ಲಿಯೂ ಅನ್ಯಾಯ ಆಗುತ್ತಿದೆ. ಇಂತಹ ಅನ್ಯಾಯ ಸರಿಪಡಿಸಲು ಸರ್ಕಾರ ಮುಂದಾಗಬೇಕು. ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಸಲಾಗುವುದು’ ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಘು ರಾಠೋಡ, ಉಪಾಧ್ಯಕ್ಷ ಶಂಕರ ಮುತ್ತಲಗೇರಿ, ಜಿಲ್ಲಾ ಸಂಚಾಲಕ ನವೀನ ಕಪಾಲಿ, ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ ಚಿನಿವಾಲ, ಶರಣು ಗಾಣಿಗೇರ, ಗಣೇಶ ಬಡಿಗೇರ, ಆಸೀಫ್ ಬಾಗವಾನ, ರಾಜಪ್ಪ ಕಾಳೆ, ಜಗದೀಶ್ ಕರ್ಪೂರಮಠ, ಸಂಜಯ್ ಕೋಲ್ಕಾರ, ಸಚಿನ್ ಸೂಳಿಕೇರಿ, ಸಿದ್ದು ಅಂಬಿಗೇರ, ಗಣೇಶ ರಜಪೂತ, ಮುತ್ತುರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.