ADVERTISEMENT

ಗೋಕಾಕ್ ಚಳವಳಿಯಲ್ಲಿ ಅಪ್ಪನ ತೊಡೆಯೇರಿದ್ದ ‘ಅಪ್ಪು’...

ಇಳಕಲ್‌ನಲ್ಲಿ ನಡೆದಿದ್ದ ಗೋಕಾಕ್ ಚಳವಳಿ ಸಭೆ

ವೆಂಕಟೇಶ್ ಜಿ.ಎಚ್
Published 29 ಅಕ್ಟೋಬರ್ 2021, 20:55 IST
Last Updated 29 ಅಕ್ಟೋಬರ್ 2021, 20:55 IST
ಇಳಕಲ್‌ನಲ್ಲಿ ನಡೆದ ಗೋಕಾಕ್ ಚಳವಳಿ ಬಹಿರಂಗ ಸಭೆಯಲ್ಲಿ ಅಪ್ಪ ಡಾ.ರಾಜಕುಮಾರ್ ಅವರ ತೊಡೆಯ ಮೇಲೆ ಕುಳಿತಿದ್ದ ಬಾಲಕ ಪುನೀತ್
ಇಳಕಲ್‌ನಲ್ಲಿ ನಡೆದ ಗೋಕಾಕ್ ಚಳವಳಿ ಬಹಿರಂಗ ಸಭೆಯಲ್ಲಿ ಅಪ್ಪ ಡಾ.ರಾಜಕುಮಾರ್ ಅವರ ತೊಡೆಯ ಮೇಲೆ ಕುಳಿತಿದ್ದ ಬಾಲಕ ಪುನೀತ್   

ಬಾಗಲಕೋಟೆ: ಇಳಕಲ್‌ನ ಕಂಠಿ ವೃತ್ತದಲ್ಲಿ (1982–83) ನಡೆದಿದ್ದ ಗೋಕಾಕ್‌ ಚಳವಳಿಯ ಬಹಿರಂಗ ಸಭೆಯಲ್ಲಿ ಡಾ.ರಾಜಕುಮಾರ್ ಅವರ ತೊಡೆಯ ಮೇಲೆ ಹೆಮ್ಮೆಯಿಂದ ಕುಳಿತು ಭಾಗವಹಿಸಿದ್ದ ಬಾಲಕ ಪುನೀತ್‌ ರಾಜಕುಮಾರ್, ಮೊನ್ನೆ ಮೊನ್ನೆಯಷ್ಟೇ ಬಾದಾಮಿ ತಾಲ್ಲೂಕಿನ ಮಹಾಕೂಟದಲ್ಲಿ ‘ನಟ ಸಾರ್ವಭೌಮ’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಕನ್ನಡದ ಅಸ್ಮಿತೆಯ ಹೋರಾಟ ಗೋಕಾಕ್ ಚಳವಳಿಯಲ್ಲಿ ಅಪ್ಪ ಸಕ್ರಿಯವಾಗಿದ್ದಾಗ ಅವರೊಂದಿಗೆ ಇಡೀ ರಾಜ್ಯ ಸುತ್ತಿದ್ದ ಪುನೀತ್, ಇಳಕಲ್‌ನಲ್ಲೂ ಇಡೀ ದಿನ ಅಪ್ಪನೊಂದಿಗೆ ಇದ್ದರು. ನಟರಾದ ಅಶೋಕ್, ಲೋಕೇಶ್ ಅವರೊಂದಿಗೆ ಡಾ.ರಾಜಕುಮಾರ್ ವೇದಿಕೆ ಹಂಚಿಕೊಂಡಿದ್ದರೆ, ಸ್ಥಳೀಯರಾದ ಬಸವರಾಜ ಸಪ್ಪರದ, ಸಿ.ಸಿ.ಚಂದ್ರಾಪಟ್ಟಣ, ಎಲ್‌.ಜಿ.ಕುಟಂನಗೌಡ ನಟರೊಂದಿಗೆ ಇದ್ದರು. ಈ ವೇಳೆ ಅಪ್ಪನ ತೊಡೆಯ ಮೇಲೆ ಕುಳಿತು ಪುನೀತ್ ಭಾಷಣ ಆಲಿಸಿದ್ದರು ಎಂದು ಇಳಕಲ್‌ನ ಹಿರಿಯರುನೆನಪಿಸಿಕೊಳ್ಳುತ್ತಾರೆ.

ಬಾಗಲಕೋಟೆಯ ಅಬಕಾರಿ ಉದ್ಯಮಿ ಕೆ.ಬಿಚ್ಚಯ್ಯ ಅವರ ಕುಟುಂಬದೊಂದಿಗೆ ಡಾ.ರಾಜ್‌ಕುಮಾರ ಕುಟುಂಬ ವೈವಾಹಿಕ ನಂಟು ಹೊಂದಿದ್ದು, ಬಿಚ್ಚಯ್ಯ ಅವರ ಮನೆಗೂ ಪುನೀತ್ ವೈಯಕ್ತಿಕ ಭೇಟಿನೀಡಿದ್ದರು.

ADVERTISEMENT

ತಡರಾತ್ರಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿ:ಪವನ್‌ ಒಡೆಯರ್‌ ನಿರ್ದೇಶನದ ‘ನಟ ಸಾರ್ವಭೌಮ’ ಸಿನಿಮಾ ಚಿತ್ರೀಕರಣಕ್ಕೆಂದು ಕಳೆದ ವರ್ಷ ಪುನೀತ್ ರಾಜಕುಮಾರ್ ಬಾದಾಮಿ, ಮಹಾಕೂಟೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ತಡರಾತ್ರಿಯವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಗಾಜು ಪುಡಿ ಮಾಡಿ ಆಕ್ರೋಶ..

ಪುನೀತ್‌ ಸಾವಿನ ಸುದ್ದಿ ಗೊತ್ತಾದರೂ ಅವರ ಗೌರವಾರ್ಥ ಸಿನಿಮಾ ಪ್ರದರ್ಶನ ನಿಲ್ಲಿಸಲಿಲ್ಲ ಎಂದು ಆರೋಪಿಸಿ ಅ‍ಪ್ಪು ಅಭಿಮಾನಿಗಳು ಬಾಗಲಕೋಟೆ ನಗರದ ಶಕ್ತಿ ಥಿಯೇಟರ್‌ಗೆ ತೆರಳಿ ಗದ್ದಲ ಮಾಡಿದರು. ಈ ವೇಳೆ ಅಲ್ಲಿ ಭಜರಂಗಿ–2 ಸಿನಿಮಾ ಪ್ರದರ್ಶನ ನಡೆಯುತ್ತಿತ್ತು. ಕೆಲವರು ಥಿಯೇಟರ್‌ನಲ್ಲಿನ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತ‍‍ಪಡಿಸಿದರು. ಶಕ್ತಿ ಥಿಯೇಟರ್ ಬಳಿ ನೆರೆದ ಸೆಟ್ಲಮೆಂಟ್ ಪ್ರದೇಶದ ಪುನೀತ್ ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆದು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.