ರಬಕವಿ ಬನಹಟ್ಟಿ: ಅಕ್ಟೋಬರ್ 22ರಂದು ನಡೆಯುವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಸಂಜೆ ಉಚ್ಛಾಯಿ ರಥೋತ್ಸವ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಮಸ್ತ ಸೋಮವಾರಪೇಟೆಯ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ ಮಾತನಾಡಿ, ‘22ರಂದು ಮಲ್ಲಿಕಾರ್ಜುನ ದೇವರ ಜಾತ್ರೆ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಲಿದೆ. ನೂರಾರು ಭಕ್ತರು ದೀರ್ಘದಂಡ ನಮಸ್ಕಾರದ ಮೂಲಕ ಹರಕೆ ತೀರಿಸಲಿದ್ದಾರೆ’ ಎಂದರು.
‘ಸಂಜೆ 7 ಗಂಟೆಗೆ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಕರಡಿ ಮತ್ತು ಸಂಬಾಳ ವಾದನಗಳ ಪ್ರದರ್ಶನ ನಡೆಯಲಿದೆ. ರಾತ್ರಿ 8ಕ್ಕೆ ಮಲ್ಲಿಕಾರ್ಜುನ ದೇವರ ರಥೋತ್ಸವ ಜರುಗಲಿದೆ. ಹಳೆಯ ಗ್ರಂಥಾಲಯದಿಂದ ಆರಂಭಗೊಳ್ಳುವ ರಥೋತ್ಸವವು ಸೋಮವಾರಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜುಂಜಪ್ಪನವರ ಮನೆಯವರೆಗೆ ಸಾಗಲಿದೆ’ ಎಂದು ಹೇಳಿದರು.
‘23ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. 24ರಂದು ಕಳಸೋತ್ಸವದೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ. 20ಕ್ಕೂ ಹೆಚ್ಚು ಸಮುದಾಯಗಳು ಒಗ್ಗಟ್ಟಾಗಿ ಜಾತ್ರೆ ನಡೆಸುತ್ತಿರುವುದು ವಿಶೇಷ’ ಎಂದು ತಿಳಿಸಿದರು.
ಚರಂತಯ್ಯ ಹಿರೇಮಠ, ರಾಚಯ್ಯ ಮಠಪತಿ, ಚನಬಸಯ್ಯ ಮಠಪತಿ, ಶಾಸಕ ಸಿದ್ದು ಸವದಿ, ಸಿದ್ದನಗೌಡ ಪಾಟೀಲ, ಮಹಾಶಾಂತ ಶೆಟ್ಟಿ, ಪ್ರಶಾಂತ ಕೊಳಕಿ, ಕಿರಣ ಆಳಗಿ, ಮಲ್ಲಿಕಾರ್ಜುನ ಬಾವಲತ್ತಿ, ಬ್ರಿಜ್ಮೋಮನ ಡಾಗಾ, ಚನ್ನಪ್ಪ ಗುಣಕಿ, ಚಿದಾನಂದ ಹೊರಟ್ಟಿ, ಗಂಗಪ್ಪ ಹಾದಿಮನಿ, ಮಲ್ಲಪ್ಪ ಜನವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.