ADVERTISEMENT

ಬಾಗಲಕೋಟೆ | 7,629 ಪಡಿತರ ಚೀಟಿ ಎಪಿಎಲ್‌ಗೆ ಪರಿವರ್ತನೆ

ಬಿಪಿಎಲ್‌ ಕಾರ್ಡ್‌ ಮಾನದಂಡ ಉಲ್ಲಂಘಿಸಿದವರ ಪತ್ತೆ ಕಾರ್ಯ ಒಂದೂವರೆ ತಿಂಗಳಿಂದ ಚುರುಕು

ಬಸವರಾಜ ಹವಾಲ್ದಾರ
Published 22 ಅಕ್ಟೋಬರ್ 2025, 6:51 IST
Last Updated 22 ಅಕ್ಟೋಬರ್ 2025, 6:51 IST
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ಬಾಗಲಕೋಟೆ: ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅರ್ಹರಲ್ಲದ 7,629 ‘ಅಂತ್ಯೋದಯ’ ಮತ್ತು ‘ಬಿಪಿಎಲ್‌’ ಪಡಿತರ ಚೀಟಿಗಳನ್ನು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ‘ಎಪಿಎಲ್‌’ ಕಾರ್ಡ್‌ಗಳನ್ನಾಗಿ ಪರಿವರ್ತಿಸಿದ್ದಾರೆ. 

ರಾಜ್ಯದೆಲ್ಲೆಡೆ ನಡೆದಿರುವಂತೆ ಜಿಲ್ಲೆಯಲ್ಲಿಯೂ ಒಂದೂವರೆ ತಿಂಗಳಿಂದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ಆರಂಭಿಸಲಾಗಿದ್ದು, ಬಿಪಿಎಲ್‌ ಪಡೆಯಲು ಇರುವ ಮಾನದಂಡಗಳಡಿ ಬಾರದವರ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸಲಾಗುತ್ತಿದೆ.

ಜಿಲ್ಲೆಯಲ್ಲಿ 7,629 ಕಾರ್ಡ್‌ಗಳು ಅನರ್ಹರ ಪಾಲಾಗಿದ್ದವು. ಇವುಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಈ ಎಲ್ಲ ಕಾರ್ಡ್‌ಗಳನ್ನು ಎಪಿಎಲ್‌ (ಆದ್ಯತಾ ರಹಿತ ಕುಟುಂಬ–ಎನ್‌ಪಿಎಚ್‌ಎಚ್‌) ಕಾರ್ಡ್‌ಗಳಿಗೆ ಪರಿವರ್ತಿಸಿದ್ದಾರೆ. 

ADVERTISEMENT

ಅರ್ಹರಲ್ಲದವರೂ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು), ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಪಡಿತರ ಸೇರಿದಂತೆ ಹಲವಾರು ಸೌಲಭ್ಯಗಳು ಅನರ್ಹರ ಪಾಲಾಗುತ್ತಿದ್ದವು. ಅದನ್ನು ತಪ್ಪಿಸಲು ಸರ್ಕಾರದ ನಿರ್ದೇಶನದ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

4.82 ಲಕ್ಷ ಕಾರ್ಡ್‌ಗಳು: ಜಿಲ್ಲೆಯಲ್ಲಿ 44,783 ಅಂತ್ಯೋದಯ ಕಾರ್ಡ್‌ಗಳು, 73,762 ಎಪಿಎಲ್‌ ಕಾರ್ಡ್‌ಗಳು ಹಾಗೂ 3,64,343 ಬಿಪಿಎಲ್‌ ಕಾರ್ಡ್‌ಗಳಿವೆ. ಒಟ್ಟು ಜಿಲ್ಲೆಯಲ್ಲಿ 4,82,892 ಪಡಿತರ ಚೀಟಿಗಳಿವೆ. 

‘ಅಂತ್ಯೋದಯ’ , ‘ಬಿಪಿಎಲ್‌’ ಕಾರ್ಡ್‌ ; ಮಾನದಂಡಗಳೇನು?

l ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು

l ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ದೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು 

l ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು. ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಪಕ್ಕಾ ಮನೆ ಹೊಂದಿರುವ ಕುಟುಂಬಗಳು 

l ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಇತ್ಯಾದಿ ಹೊಂದಿದ ಕುಟುಂಬ ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲ ಕುಟುಂಬಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.