ADVERTISEMENT

ಕಾಮಗಾರಿ ಕಳಪೆಯಾದರೆ ಕ್ರಮಕೈಗೊಳ್ಳಿ: ಸಚಿವ ಆರ್.ಬಿ. ತಿಮ್ಮಾಪುರ ಸೂಚನೆ

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:17 IST
Last Updated 20 ಜುಲೈ 2025, 4:17 IST
ಬಾಗಲಕೋಟೆಯಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು 
ಬಾಗಲಕೋಟೆಯಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು    

ಬಾಗಲಕೋಟೆ: ‘ಯಾವುದೇ ಕಾಮಗಾರಿ ಕಳಪೆಯಾಗಿದ್ದರೆ, ಸಂಬಂಧಿಸಿದ ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕಾಮಗಾರಿಗಳ ಗುಣಮಟ್ಟ ಕಾಪಾಡಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು’ ಎಂದರು.

‘ಸರ್ಕಾರಿ ಶಾಲೆಗಳಿಗೆ ಪೂರೈಸುವ ಹಾಲಿನ ಪುಡಿ, ರಾಗಿ ಮಾಲ್ಟ್ ದುರುಪಯೋಗ ಮಾಡಿಕೊಂಡಿರುವ ಕುರಿತು 81 ಶಾಲೆಗಳಿಗೆ ನೋಟಿಸ್ ನೀಡಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿ.ಪಂ. ಸಿಇಒ ಶಶಿಧರ ಕುರೇರ ತಿಳಿಸಿದರು. ‘ನೋಟಿಸ್ ನೀಡಿದರೆ ಸಾಲದು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಚಿವ ತಿಳಿಸಿದರು.

ADVERTISEMENT

‘ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಸನ್ಮಾನ ಮಾಡುವುದರ ಜೊತೆಗೆ ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದ  ವಿದ್ಯಾರ್ಥಿಗಳನ್ನೂ ಸತ್ಕರಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಒಂದು ಬಾರಿಯಾದರೂ ಶಾಲೆಗೆ ಭೇಟಿ ನೀಡಬೇಕು’ ಎಂದರು.

‘ಬೀಳಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಾಮಗಾರಿ ಮಾಡದೇ ಬಿಲ್‌ ಮಾಡಿರುವ ಅಧಿಕಾರಿಗಳು ಹಾಗೂ ಬಿಲ್‌ ಪಡೆದಿರುವ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಬೇಕು. ಹಣ ವಸೂಲಿ ಮಾಡಿದರಷ್ಟೇ ಸಾಲದು’ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮಾತನಾಡಿ, ‘ಬಾದಾಮಿ ನಗರ ಆರೋಗ್ಯ ಕೇಂದ್ರದ ಸ್ವಚ್ಛತೆ ಸರಿಯಾಗಿ ಆಗುತ್ತಿಲ್ಲ. ಜಾಗ ಹಸ್ತಾಂತರ ಮಾಡಿಕೊಳ್ಳುವಂತೆ ಸೂಚಿಸಿದರೂ, ಮಾಡಿಕೊಂಡಿಲ್ಲ’ ಎಂದು ದೂರಿದರು.

ಜಿಲ್ಲಾ ಅಂಕಿ ಸಂಖ್ಯೆ ಇಲಾಖೆಯಿಂದ ಹೊರತಂದ 2024-25ನೇ ಸಾಲಿನ ಜಿಲ್ಲೆಯ ಸಮಗ್ರ ಮಾಹಿತಿಯನ್ನೊಳಗೊಂಡ ಪುಸ್ತಕ, ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ನೀಡುವ ಮಹತ್ವಾಕಾಂಕ್ಷಿ ಗೃಹ ಆರೋಗ್ಯ ಯೋಜನೆ ಮಾಹಿತಿಯುಳ್ಳ ಪುಸ್ತಕ ಬಿಡುಗಡೆ ಮಾಡಲಾಯಿತು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಎಚ್.ವೈ. ಮೇಟಿ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್‌. ಪೂಜಾರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಇದ್ದರು.

ಅಮೃತ ಯೋಜನೆ ಜಾರಿ ಗ್ಯಾಸ್ ಪೈಪ್‌ಲೈನ್‌ ಕಾಮಗಾರಿ ಪಿಎಂ ಆವಾಸ್‌ ಯೋಜನೆಯಡಿ ಮನೆಗಳ ನಿರ್ಮಾಣ ವಿಳಂಬವಾಗುತ್ತಿದ್ದು ಕೂಡಲೇ ಪೂರ್ಣಗೊಳಿಸಬೇಕು
ನಾರಾಯಣ ಭಾಂಡಗೆ ರಾಜ್ಯಸಭೆ ಸದಸ್ಯ

‘ಕೀಲಿ ನೀಡಿ ಬೀಗ ಹಾಕುತ್ತೇವೆ’:

‘ವರ್ಗಾವಣೆಯಾದ ವೈದ್ಯರ ಜಾಗಕ್ಕೆ ಬೇರೆಯವರು ಬರುವವರೆಗೆ ಅವರನ್ನು ರಿಲೀವ್ ಮಾಡಬಾರದು’ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೊಹಸಿನ್‌ ‘ವರ್ಗಾವಣೆ ಆದೇಶ ಆದ ಒಂದು ವಾರದಲ್ಲಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಆದೇಶದಲ್ಲಿರುತ್ತದೆ. ಹಾಗಾಗಿ ರಿಲೀವ್ ಮಾಡಲಾಗುತ್ತದೆ’ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪಾಟೀಲ ‘ಇನ್ನೊಬ್ಬರು ಬರುವವರೆಗೆ ರೋಗಿಗಳನ್ನು ನೋಡುವವರು ಯಾರು? ಕೀಲಿ ಕೊಡಿ ಆಸ್ಪತ್ರೆಗೆ ಬೀಗ ಹಾಕುತ್ತೇವೆ’ ಎಂದು ಹೇಳಿದರು. ಆಗ ಸಚಿವ ತಿಮ್ಮಾಪುರ ‘ಬೇರೆ ವೈದ್ಯರು ಬರುವವರೆಗೆ ರಿಲೀವ್ ಮಾಡದಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸೋಣ’ ಎಂದರು.

ಪುರುಷರಿಗೂ ಶಸ್ತ್ರಚಿಕಿತ್ಸೆ ಮಾಡಿಸಿ:

‘ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಮಹಿಳೆಯರಿಗಷ್ಟೇ ಮಾಡಲಾಗುತ್ತಿದೆ. ಪುರುಷರಿಗೂ ಮಾಡಬೇಕು. ತಾರತಮ್ಯ ಮಾಡಬಾರದು’ ಎಂದು ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ ಹೇಳಿದರು. ‘5640 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಗುರಿ ಹೊಂದಿದ್ದರೆ ಕೇವಲ 56 ಪುರುಷರ ಗುರಿ ಹೊಂದಲಾಗಿದೆ. ಮಹಿಳೆಯರನ್ನೇ ಗುರಿಯಾಗಿಸಿಕೊಳ್ಳಲಾಗಿದೆ’ ಎಂದರು. ‘ಪುರುಷರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ’ ಎಂದು ಸಚಿವ ತಿಮ್ಮಾಪುರ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.